ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ದಂತ ವೈದ್ಯರೊಬ್ಬರ ವಿರುದ್ಧ ಸಲ್ಲಿಕೆಯಾಗಿದ್ದ ಅತ್ಯಾಚಾರ ದೂರಿನ ತನಿಖೆ ನಡೆಸುತ್ತಿದ್ದ ಪೊಲೀಸರು ಇದೀಗ ಭಾರೀ ಜಾಲವೊಂದನ್ನು ಪತ್ತೆಹಚ್ಚಿ, ಹೆಡೆಮುರಿ ಕಟ್ಟಿದ್ದಾರೆ. ದೂರು ನೀಡಿದ್ದ 31 ವರ್ಷದ ಮಾಡೆಲ್ ಮತ್ತು ಕಿರುತೆರೆ ನಟಿಯೇ ಪ್ರಮುಖ ಸಂಚುಕೋರಳು ಎಂಬುದು ಬಯಲಾಗಿದ್ದು, ಹಣಕ್ಕಾಗಿ ಆಕೆ ದಂತ ವೈದ್ಯರು, ಚಲನಚಿತ್ರ ನಿರ್ದೇಶಕರು ಹಾಗೂ ರಾಷ್ಟ್ರೀಯ ಮಟ್ಟದ ಟೇಬಲ್ ಟೆನ್ನಿಸ್ ಆಟಗಾರ ಸೇರಿದಂತೆ ಸುಮಾರು 14 ಜನರ ವಿರುದ್ಧ 11 ಸುಳ್ಳು ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ದೂರುಗಳನ್ನು ನೀಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ವೈದ್ಯರ ಪತ್ನಿಯ ದೂರಿನಿಂದ ಬಯಲಾಯ್ತು ನಟಿಯ ಅಸಲಿ ರೂಪ
ದಂತ ವೈದ್ಯರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ವೈದ್ಯರನ್ನು ಬಂಧಿಸಿದ್ದರು. ಆದರೆ, ತಮ್ಮ ಪತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಹಣ ಪೀಕಲಾಗುತ್ತಿದೆ ಎಂದು ಆ ವೈದ್ಯರ ಪತ್ನಿ ನ್ಯಾಯಾಲಯದ ಮೊರೆ ಹೋದರು. ಈ ಅರ್ಜಿಯ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೆಪ್ಟೆಂಬರ್ 18 ರಂದು ನಟಿಯನ್ನು ಬಂಧಿಸಿದರು. ಅಕ್ಟೋಬರ್ 6 ರಂದು ನಡೆದ ವಿಚಾರಣೆಯಲ್ಲಿ ಜಾಮೀನು ಅರ್ಜಿ ವಜಾಗೊಂಡಿದ್ದು, ನಟಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಟಿಯ ಪರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದರೂ, ಕೋಲ್ಕತ್ತಾದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಕೆ ಹೂಡಿದ್ದ ಸಾಲು ಸಾಲು ಪ್ರಕರಣಗಳು ಪೊಲೀಸರ ಸಂಶಯವನ್ನು ಖಚಿತಪಡಿಸಿವೆ.
ಪ್ರೋಟೀನ್ ಪೌಡರ್, ಸಿಗರೇಟ್ನಿಂದ ಹಿಡಿದು ಲಕ್ಷಾಂತರ ರೂ. ಬೇಡಿಕೆ!
ಬಂಧಿತ ನಟಿಯ ಬ್ಲ್ಯಾಕ್ಮೇಲಿಂಗ್ ತಂತ್ರದ ಬಗ್ಗೆ ಸಂತ್ರಸ್ತ ದಂತ ವೈದ್ಯ ವಿವರಣೆ ನೀಡಿದ್ದು, ರೋಗಿಯಾಗಿ ಪರಿಚಯವಾದ ನಟಿ ನಂತರ ಗ್ರಾಹಕರನ್ನು ಕೊಡಿಸುವುದಾಗಿ ಹೇಳಿ ಭೇಟಿಯಾಗಿದ್ದಳು. ತರುವಾಯ ಡೆಲಿವರಿ ಆಪ್ಗಳ ಮೂಲಕ ಪ್ರೋಟೀನ್ ಪೌಡರ್, ಗ್ರೀನ್ ಟೀ, ಸಿಗರೇಟ್ ಹಾಗೂ ರಾತ್ರಿಯ ಊಟವನ್ನು ಕಳುಹಿಸುವಂತೆ ಪೀಡಿಸಲು ಆರಂಭಿಸಿದ್ದಳು. ಹಣ ನೀಡದಿದ್ದರೆ ರಾಜಕೀಯ ಪ್ರಭಾವ ಬಳಸಿ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 40,000ರೂ. ಪಡೆದುಕೊಂಡಿದ್ದಳು. ಇದನ್ನು ವಿರೋಧಿಸಿ ವೈದ್ಯರು ದೂರು ನೀಡಲು ಮುಂದಾಗುತ್ತಿದ್ದಂತೆ, ನಟಿ ಮುಂಚಿತವಾಗಿಯೇ ಅತ್ಯಾಚಾರ ದೂರು ದಾಖಲಿಸಿ ವೈದ್ಯರು ಜೈಲು ಪಾಲಾಗುವಂತೆ ಮಾಡಿದ್ದಳು.
ಕ್ರೀಡಾಪಟು ಸೇರಿ ಪ್ರಮುಖರ ಜೀವನದ ಜೊತೆ ಆಟ
ಇದೇ ರೀತಿಯ ಅನುಭವವನ್ನು ರಾಷ್ಟ್ರೀಯ ಮಟ್ಟದ ಟೇಬಲ್ ಟೆನ್ನಿಸ್ ಆಟಗಾರರೊಬ್ಬರು ಹಂಚಿಕೊಂಡಿದ್ದಾರೆ. 2019 ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ನಟಿ, ಪ್ರೋಟೀನ್ ಪೌಡರ್ ಹಾಗೂ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದಳು. ಹಣ ನೀಡಲು ನಿರಾಕರಿಸಿದಾಗ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಮೇ ತಿಂಗಳಲ್ಲಿ ದೂರು ನೀಡಿದ್ದಳು. ಕ್ರೀಡಾಪಟು ಯುರೋಪ್ನಲ್ಲಿ ಪಂದ್ಯಾವಳಿಯಲ್ಲಿದ್ದಾಗ ಈ ದೂರು ದಾಖಲಾಗಿದ್ದು, ಅವರ ವೃತ್ತಿಜೀವನದ ಮೇಲೆಯೇ ತೀವ್ರ ಪರಿಣಾಮ ಬೀರಿತ್ತು. ಇದೀಗ ‘ಮೆನ್ಸ್ ರೈಟ್ಸ್ ಫೋರಂ’ ಸಂಸ್ಥೆಯು ಸಂತ್ರಸ್ತರಿಗೆ ಕಾನೂನು ನೆರವು ನೀಡಲು ಮುಂದೆ ಬಂದಿದ್ದು, ಕೋಲ್ಕತ್ತಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ:ದರ ಏರಿಕೆಯ ಬಿಸಿಗೆ ಟ್ರಂಪ್ ಯೂಟರ್ನ್: ರಷ್ಯಾದಿಂದ ಇಂಧನ ಖರೀದಿಗೆ ಖುದ್ದು ಮುಂದಾದ ಅಮೆರಿಕ ಅಧ್ಯಕ್ಷ!


















