ಬೆಂಗಳೂರು : ಯುಎಇಯ ಪ್ರತಿಷ್ಠಿತ ಟಿ20 ಲೀಗ್ ‘ಐಎಲ್‌ಟಿ20’ಯ (ILT20) ಐದನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 1ರಂದು ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ ಫ್ರಾಂಚೈಸಿಗಳು ತಮ್ಮ ಪ್ರಮುಖ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿವೆ. ಈ ಬಾರಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್ ಹಾಗೂ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಫಿನ್ ಅಲೆನ್ ಮೊದಲ ಬಾರಿಗೆ ಲೀಗ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಮುಂದಿನ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಯುಎಇಯಲ್ಲಿ 34 ಪಂದ್ಯಗಳ ರೋಚಕ ಟಿ20 ಟೂರ್ನಿ ನಡೆಯಲಿದೆ. ಆರು ತಂಡಗಳ ನಡುವಿನ ಈ ಕಾದಾಟಕ್ಕೆ ಈಗಲೇ ವೇದಿಕೆ ಸಿದ್ಧವಾಗುತ್ತಿದೆ. ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ನ್ಯೂಜಿಲೆಂಡ್‌ನ ಫಿನ್ ಅಲೆನ್ ಸೇರ್ಪಡೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರರಾದ ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರನ್ನು ಗಲ್ಫ್ ಜೈಂಟ್ಸ್ ತಂಡ ಒಪ್ಪಂದ ಮಾಡಿಕೊಂಡಿದೆ. ಇದೇ ವೇಳೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಮೂರು ವರ್ಷಗಳ ಬಳಿಕ ದುಬೈ ಕ್ಯಾಪಿಟಲ್ಸ್ ತಂಡದ ಮೂಲಕ ಮತ್ತೆ ಲೀಗ್‌ಗೆ ಮರಳಲಿದ್ದಾರೆ.
ಆಗಸ್ಟ್ 3ರಂದು ಆರೂ ಫ್ರಾಂಚೈಸಿಗಳು ಹರಾಜಿಗೂ ಮುನ್ನ ತಲಾ ನಾಲ್ಕು ವಿದೇಶಿ ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಉಳಿದ ಸ್ಥಾನಗಳನ್ನು ಅಕ್ಟೋಬರ್ 1ರಂದು ದುಬೈನಲ್ಲಿ ನಡೆಯುವ ಐದನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ.
ಅನುಭವ ಹಾಗೂ ಸ್ಫೋಟಕ ಆಟಗಾರರ ಸಮ್ಮಿಲನ
ಟಿ20 ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಫಿನ್ ಅಲೆನ್ ಮುಂಚೂಣಿಯಲ್ಲಿದ್ದಾರೆ. 27 ವರ್ಷದ ಅಲೆನ್, ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 170ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಸಿಡಿಸಿದ ದಾಖಲೆ ಹೊಂದಿದ್ದಾರೆ. ಅದೇ ರೀತಿ, ಗಲ್ಫ್ ಜೈಂಟ್ಸ್ ಪಾಲಾಗಿರುವ ಮಿಲ್ಲರ್, ದಕ್ಷಿಣ ಆಫ್ರಿಕಾ ಪರ 140 ಟಿ20 ಪಂದ್ಯಗಳಲ್ಲಿ 2,800ಕ್ಕೂ ಹೆಚ್ಚು ರನ್ ಗಳಿಸಿದ ಬಾರೀ ಅನುಭವ ಹೊಂದಿದ್ದಾರೆ. ಇನ್ನು ಸ್ಪಿನ್ನರ್‌ಗಳನ್ನು ದಂಡಿಸುವಲ್ಲಿ ನಿಸ್ಸೀಮರಾಗಿರುವ ಕ್ಲಾಸೆನ್ ಅವರ ಆಗಮನ ಗಲ್ಫ್ ಜೈಂಟ್ಸ್ ಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಇವರೊಂದಿಗೆ, 2021ರ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯ ಮಾರ್ಕಸ್ ಸ್ಟೋಯಿನಿಸ್ ಅವರ ಮರಳುವಿಕೆ ದುಬೈ ಕ್ಯಾಪಿಟಲ್ಸ್‌ಗೆ ಆನೆಬಲ ತಂದಿದೆ.
ಫ್ರಾಂಚೈಸಿಗಳಲ್ಲಿ ಹಳೆಯ ಮುಖಗಳ ಮುಂದುವರಿಕೆ
ಹೊಸ ಆಟಗಾರರ ಜೊತೆಗೆ ಹಲವು ಪ್ರಮುಖ ಹಳೆಯ ಆಟಗಾರರನ್ನು ತಂಡಗಳು ಉಳಿಸಿಕೊಂಡಿವೆ. ಅಬುಧಾಬಿ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್ ಅವರನ್ನು ಉಳಿಸಿಕೊಂಡಿದ್ದು, ಜೇಸನ್ ಹೋಲ್ಡರ್ ಅವರನ್ನು ಮರಳಿ ತಂದಿದೆ. ಡೆಸರ್ಟ್ ವೈಪರ್ಸ್ ತಂಡ ಶಿಮ್ರಾನ್ ಹೆಟ್ಮೆಯರ್ ಮತ್ತು ಡಾನ್ ಲಾರೆನ್ಸ್ ಅವರ ಜೊತೆಗೆ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್-ಉರ್-ರಹಮಾನ್ ಅವರನ್ನು ಸೇರಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ಒಡೆತನದ ಎಂಐ ಎಮಿರೇಟ್ಸ್, ನಿಕೋಲಸ್ ಪೂರನ್, ರಶೀದ್ ಖಾನ್ ಹಾಗೂ ರೊಮಾರಿಯೋ ಶೆಫರ್ಡ್ ಅವರನ್ನು ಉಳಿಸಿಕೊಂಡಿದ್ದರೆ, ವೆಸ್ಟ್ ಇಂಡೀಸ್‌ನ ಶೆರ್ಫೇನ್ ರುದರ್‌ಫೋರ್ಡ್ ಅವರನ್ನು ಹೊಸದಾಗಿ ತಂಡಕ್ಕೆ ಸೇರ್ಪಡೆ ಮಾಡಿದೆ.
ಕಳೆದ ನಾಲ್ಕನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಡೆಸರ್ಟ್ ವೈಪರ್ಸ್ ಚೊಚ್ಚಲ ಬಾರಿಗೆ ಐಎಲ್‌ಟಿ20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್‌ನಲ್ಲಿ ಎಂಐ ಎಮಿರೇಟ್ಸ್ ತಂಡವನ್ನು ಮಣಿಸಿ ವೈಪರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈಗ ಎಲ್ಲಾ ಫ್ರಾಂಚೈಸಿಗಳ ಚಿತ್ತ ಅಕ್ಟೋಬರ್ 1ರ ಹರಾಜಿನ ಮೇಲಿದ್ದು, ಸೆಪ್ಟೆಂಬರ್ 12ರವರೆಗೆ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ : ತಂದೆಯ ಹಾದಿಯಲ್ಲಿ ಪುತ್ರ : ಲ್ಯಾಂಕಾಶೈರ್ ಪರ ಚೊಚ್ಚಲ ಶತಕ ಸಿಡಿಸಿದ ಆಂಡ್ರ್ಯೂ ಫ್ಲಿಂಟಾಫ್ ಪುತ್ರ ರಾಕಿ ಫ್ಲಿಂಟಾಫ್



















