ಬೆಂಗಳೂರು : ಹೇರೋಹಳ್ಳಿ ಉಪ ವಿಭಾಗದ ARO ಮಂಜುಳಾ ವಿರುದ್ಧ ಕಾನೂನು ಬಾಹಿರವಾಗಿ ‘ಎ’/‘ಇ’ ಖಾತಾಗಳನ್ನು ಮಾಡಿಕೊಟ್ಟು ಪಾಲಿಕೆಗೆ ಕೋಟ್ಯಾಂತರ ರೂ. ನಷ್ಟ ಉಂಟು ಮಾಡಿರುವ ಆರೋಪದಡಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡಿನ ವ್ಯಾಪ್ತಿಯ ಹೇರೋಹಳ್ಳಿ ಗ್ರಾಮದ ಸರ್ವೆ ನಂ.56/1ರಲ್ಲಿರುವ 4.20 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಯ ಸುಮಾರು 50 ನಿವೇಶನಗಳಿಗೆ ನಿಯಮ ಉಲ್ಲಂಘಿಸಿ ಇ-ಖಾತಾ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಜಮೀನಿನ ಮೌಲ್ಯವು ಸುಮಾರು 235 ಕೋಟಿ ಎಂದು ಹೇಳಲಾಗಿದೆ.
ಈ ಜಮೀನು ದಿವಂಗತ ಗಂಗಯ್ಯ ಅವರ ಹೆಸರಿನಲ್ಲಿದ್ದು, ಅವರ ಕುಟುಂಬಸ್ಥರ ನಡುವೆ ಸ್ವತ್ತಿನ ಹಕ್ಕು ಸಂಬಂಧ ನಗರ ಸಿವಿಲ್ ನ್ಯಾಯಾಲಯದಲ್ಲಿ O.S. No.1270/2025 ಪ್ರಕರಣ ವಿಚಾರಣೆಯಲ್ಲಿದೆ. ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದರೂ ಸಹ ಖಾತಾ ಮಂಜೂರು ಮಾಡಿರುವುದು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ.
ಆರೋಪದ ಪ್ರಕಾರ, ಬಡಾವಣೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಯಿಂದ ಯಾವುದೇ ನಕ್ಷೆ ಮಂಜೂರಾತಿ ಪಡೆಯಲಾಗಿಲ್ಲ. “ಪಹಣಿ” ದಾಖಲೆ ಮಾತ್ರ ಇರುವ ಕೃಷಿ ಜಮೀನನ್ನು ಕಾನೂನುಬಾಹಿರವಾಗಿ ನಿವೇಶನಗಳಾಗಿ ವಿಭಜಿಸಿ, ಶುದ್ಧ ಕ್ರಯಪತ್ರಗಳಿಲ್ಲದಿದ್ದರೂ ಸಹ ಇ-ಖಾತಾ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ.
ಇದಲ್ಲದೆ, ಈಗಾಗಲೇ ಸ್ಕ್ಯಾನ್ ಆಗಿರುವ ಖಾತಾ ಪುಸ್ತಕಗಳ ಖಾಲಿ ಹಾಳೆಗಳಲ್ಲಿ QC ಹೆಸರಿನಲ್ಲಿ ತಿದ್ದುಪಡಿ ಮಾಡಿ ಹಿಂಬದಿಯಿಂದ ದಾಖಲೆ ಸೇರಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇಂತಹ ತಿದ್ದುಪಡಿ ಮಾಡಲು ಅವಕಾಶವು ಸಂಬಂಧಿತ ಉಪವಿಭಾಗದ ARO ಗಳಿಗಷ್ಟೇ ಇರುವುದರಿಂದ ಅಧಿಕಾರ ದುರುಪಯೋಗ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿಯಮಾನುಸಾರ ‘ಎ’/‘ಇ’ ಖಾತಾಗಳಿಗೆ ಸುಧಾರಣಾ ಶುಲ್ಕ ಹಾಗೂ ಮಾರ್ಗಸೂಚಿ ದರದ ಶೇಕಡಾ 5 ರಷ್ಟು ಹಣವನ್ನು ಪಾವತಿಸಿ, ಜಂಟಿ ಆಯುಕ್ತರು ಅಥವಾ ಉಪ ಆಯುಕ್ತರ ಅನುಮೋದನೆ ಪಡೆಯುವುದು ಕಡ್ಡಾಯ. ಆದರೆ ಈ ಪ್ರಕ್ರಿಯೆಗಳನ್ನು ಮೀರಿ ಖಾತಾಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ 50 ನಿವೇಶನಗಳಿಗೆ ಕಾನೂನುಬದ್ಧವಾಗಿ ಖಾತಾ ಮಾಡಿದ್ದರೆ ಪಾಲಿಕೆಗೆ ಕನಿಷ್ಠ 6 ರಿಂದ 7 ಕೋಟಿ ಆದಾಯ ಬರುತ್ತಿತ್ತು ಎನ್ನಲಾಗಿದೆ.
ARO ಮಂಜುಳಾ ಅವರು 2 ಕೋಟಿಗೂ ಅಧಿಕ ಲಂಚ ಪಡೆದು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಬಿಜೆಪಿ ಮುಖಂಡ N.R. ರಮೇಶ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ARO ಮಂಜುಳಾ ಅವರನ್ನು ತಕ್ಷಣ ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಬೇಕು. ಜೊತೆಗೆ ಕಾನೂನು ಬಾಹಿರವಾಗಿ ನೀಡಿರುವ ಎಲ್ಲಾ ‘ಎ’/‘ಇ’ ಖಾತಾಗಳನ್ನು ರದ್ದುಪಡಿಸಬೇಕು ಎಂದು GBA ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಕಂದಾಯ) ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರನ್ನು N.R. ರಮೇಶ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ : 74 ಡಿವೈಎಸ್‌ಪಿ, 293 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ – ರಾಜ್ಯ ಸರ್ಕಾರ ಆದೇಶ!



















