ಬೆಂಗಳೂರು : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2027ರ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯ ರೂಪುರೇಷೆಗಳನ್ನು ಅಂತಿಮಗೊಳಿಸಿದೆ. ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಕ್ರಿಕೆಟ್ ಹಬ್ಬವು ಅಕ್ಟೋಬರ್ 4 ರಿಂದ ನವೆಂಬರ್ 21ರವರೆಗೆ ನಡೆಯಲಿದ್ದು, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ರಾಷ್ಟ್ರಗಳು ಜಂಟಿಯಾಗಿ ಆತಿಥ್ಯ ವಹಿಸಲಿವೆ.
ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ಕುರಿತ ಪ್ರಸ್ತಾವನೆಗೆ ತಾತ್ಕಾಲಿಕ ಒಪ್ಪಿಗೆ ಸೂಚಿಸಲಾಗಿದ್ದು, ಮುಂಬರುವ ಜುಲೈನಲ್ಲಿ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಅಧಿಕೃತ ಮುದ್ರೆ ಬೀಳುವ ನಿರೀಕ್ಷೆಯಿದೆ. ಈ ಬಾರಿಯ ಟೂರ್ನಿಯು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಆಫ್ರಿಕನ್ ನೆಲಕ್ಕೆ ಮರಳಿದ ಕ್ರಿಕೆಟ್ ಮಹೋತ್ಸವ
ಸುಮಾರು ಎರಡು ದಶಕಗಳ ಸುದೀರ್ಘ ವಿರಾಮದ ನಂತರ ಪುರುಷರ ಹಿರಿಯರ ಏಕದಿನ ವಿಶ್ವಕಪ್ ಟೂರ್ನಿಯು ಆಫ್ರಿಕಾ ಖಂಡಕ್ಕೆ ಮರಳುತ್ತಿರುವುದು ಈ ಬಾರಿಯ ವಿಶೇಷ. 2003ರಲ್ಲಿ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ಕೀನ್ಯಾ ದೇಶಗಳು ಜಂಟಿಯಾಗಿ ವಿಶ್ವಕಪ್ ಆಯೋಜಿಸಿದ್ದವು. ಅದಾದ ಬಳಿಕ ದಕ್ಷಿಣ ಆಫ್ರಿಕಾ 2007ರ ಟಿ-20 ವಿಶ್ವಕಪ್, 2009ರ ಚಾಂಪಿಯನ್ಸ್ ಟ್ರೋಫಿ ಹಾಗೂ ಇತ್ತೀಚೆಗೆ 2023ರ ಮಹಿಳಾ ಟಿ-20 ವಿಶ್ವಕಪ್‌ಗೆ ಯಶಸ್ವಿಯಾಗಿ ಆತಿಥ್ಯ ವಹಿಸಿತ್ತು. ಜೊತೆಗೆ ಜಿಂಬಾಬ್ವೆ ಮತ್ತು ನಮೀಬಿಯಾ ಕೂಡ ಇತ್ತೀಚೆಗೆ ಐಸಿಸಿ ಅಂಡರ್-19 ಪುರುಷರ ವಿಶ್ವಕಪ್ ಅನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಅನುಭವ ಹೊಂದಿವೆ. ಈ ಎಲ್ಲ ಯಶಸ್ಸಿನ ಹಿನ್ನೆಲೆಯಲ್ಲಿ 2027ರ ಮೆಗಾ ಈವೆಂಟ್ ಅನ್ನು ಆಫ್ರಿಕನ್ ನೆಲದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳು ಆರಂಭವಾಗಿವೆ.
ಹೊಸ ಸ್ವರೂಪದ ರೋಮಾಂಚನ
ಕಳೆದ ಎರಡು ವಿಶ್ವಕಪ್ ಟೂರ್ನಿಗಳಲ್ಲಿ (2019 ಮತ್ತು 2023) ಕೇವಲ 10 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆದರೆ 2027ರ ಟೂರ್ನಿಯಲ್ಲಿ 14 ತಂಡಗಳು ಪಾಲ್ಗೊಳ್ಳಲಿದ್ದು, ಹಳೆಯ ಹಾಗೂ ಹೆಚ್ಚು ಪೈಪೋಟಿಯಿಂದ ಕೂಡಿದ ಮಾದರಿಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ಒಟ್ಟು 14 ತಂಡಗಳನ್ನು ತಲಾ ಏಳು ತಂಡಗಳ ಎರಡು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಲೀಗ್ ಹಂತದ ರೋಚಕ ಪಂದ್ಯಗಳ ಮುಕ್ತಾಯದ ನಂತರ, ಎರಡೂ ಗುಂಪುಗಳಿಂದ ಅಗ್ರ ಮೂರು ಸ್ಥಾನ ಪಡೆಯುವ ತಂಡಗಳು ಮುಂದಿನ ‘ಸೂಪರ್ ಸಿಕ್ಸ್’ ಹಂತಕ್ಕೆ ಪ್ರವೇಶಿಸಲಿವೆ. ಈ ಸೂಪರ್ ಸಿಕ್ಸ್ ಹಂತವು ಫೈನಲ್ ಹಾಗೂ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣ ಹಾಗೂ ಸ್ಪರ್ಧಾತ್ಮಕಗೊಳಿಸಲಿದೆ.
ಪಂದ್ಯಗಳ ಹಂಚಿಕೆ ಮತ್ತು ವಿಕ್ಟೋರಿಯಾ ಜಲಪಾತದ ಬಳಿ ಹೊಸ ಕ್ರೀಡಾಂಗಣ
ಟೂರ್ನಿಯ ಒಟ್ಟು 54 ಪಂದ್ಯಗಳ ಪೈಕಿ ಸಿಂಹಪಾಲು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿಯೇ ನಡೆಯಲಿವೆ. ದಕ್ಷಿಣ ಆಫ್ರಿಕಾದ ಎಂಟು ಪ್ರಮುಖ ಕ್ರೀಡಾಂಗಣಗಳಲ್ಲಿ 40ಕ್ಕೂ ಹೆಚ್ಚು ಪಂದ್ಯಗಳು ಜರುಗಲಿವೆ. ಉಳಿದಂತೆ ಜಿಂಬಾಬ್ವೆಯ ಮೂರು ಕ್ರೀಡಾಂಗಣಗಳಲ್ಲಿ 8 ರಿಂದ 10 ಪಂದ್ಯಗಳು ಹಾಗೂ ನಮೀಬಿಯಾದಲ್ಲಿ ಮೂರು ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಈ ಟೂರ್ನಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಕ್ರೀಡಾಂಗಣ.
ಹರಾರೆ ಮತ್ತು ಬುಲವಾಯೊ ಜೊತೆಗೆ ವಿಕ್ಟೋರಿಯಾ ಫಾಲ್ಸ್ ನಗರವನ್ನು ಕೂಡ ಆತಿಥೇಯ ತಾಣವಾಗಿ ಸೇರ್ಪಡೆಗೊಳಿಸಲಾಗಿದೆ. ಪ್ರಸಿದ್ಧ ವಿಕ್ಟೋರಿಯಾ ಜಲಪಾತದ ಸಮೀಪ ಹೊಸದಾಗಿ ನಿರ್ಮಾಣವಾಗುತ್ತಿರುವ ‘ಫಾಲೆ ಮೊಸಿ-ಓವಾ-ತುನ್ಯಾ’ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಈ ವರ್ಷದಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಮೊದಲು ದೇಶೀಯ ಪಂದ್ಯಗಳ ಆಯೋಜನೆಯೊಂದಿಗೆ ಪರೀಕ್ಷೆಗೊಳಪಡಲಿದೆ. ತದನಂತರ 2027ರ ಮೇ ತಿಂಗಳಲ್ಲಿ ಈ ಸುಂದರ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು.
ನಮೀಬಿಯಾಗೆ ಅರ್ಹತಾ ಸವಾಲು
ಆತಿಥೇಯ ರಾಷ್ಟ್ರಗಳಾಗಿರುವುದರಿಂದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳು ಐಸಿಸಿ ಪೂರ್ಣಾವಧಿ ಸದಸ್ಯತ್ವದ (Full Member status) ಆಧಾರದ ಮೇಲೆ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಆದರೆ, ಸಹ ಆತಿಥೇಯ ರಾಷ್ಟ್ರವಾಗಿದ್ದರೂ ನಮೀಬಿಯಾ ತಂಡವು ಕಠಿಣ ಅರ್ಹತಾ ಸುತ್ತಿನ (ಕ್ವಾಲಿಫೈಯರ್) ಮೂಲಕವೇ ವಿಶ್ವಕಪ್ ಟಿಕೆಟ್ ಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಈ ವಿಶ್ವಕಪ್ ಕೇವಲ ಒಂದು ಟೂರ್ನಿಯಾಗಿರದೆ, ಐಸಿಸಿಯ 2027-31ರ ಅವಧಿಯ ‘ಭವಿಷ್ಯದ ಪ್ರವಾಸಗಳ ಕಾರ್ಯಕ್ರಮ’ದ (ಎಫ್‌ಟಿಪಿ) ಆರಂಭಿಕ ಘಟ್ಟವಾಗಿಯೂ ರೂಪುಗೊಳ್ಳಲಿದೆ.
ಇದೇ ವೇಳೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಮಾದರಿಯಲ್ಲಿ ಮಹತ್ವದ ಬದಲಾವಣೆ ತರುವ ಕುರಿತು ಐಸಿಸಿ ಗಂಭೀರ ಚಿಂತನೆ ನಡೆಸುತ್ತಿದೆ. ಹಾಲಿ ಇರುವ ತಂಡಗಳ ಜೊತೆಗೆ ಜಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಎಲ್ಲಾ 12 ಪೂರ್ಣಾವಧಿ ಸದಸ್ಯ ರಾಷ್ಟ್ರಗಳನ್ನು ಡಬ್ಲ್ಯುಟಿಸಿ ವ್ಯಾಪ್ತಿಗೆ ತರುವ ಪ್ರಸ್ತಾವನೆ ಮಂಡಳಿಯ ಮುಂದಿದೆ. ಜೊತೆಗೆ, ದ್ವಿಪಕ್ಷೀಯ ಸರಣಿ ಹೊರತಾಗಿ ನಡೆಯುವ ಪ್ರತ್ಯೇಕ ಟೆಸ್ಟ್ ಪಂದ್ಯಗಳನ್ನೂ (ಸ್ಟ್ಯಾಂಡ್-ಅಲೋನ್) ಡಬ್ಲ್ಯುಟಿಸಿ ಅಂಕಪಟ್ಟಿಗೆ ಪರಿಗಣಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಜುಲೈನಲ್ಲಿ ನಡೆಯುವ ಎಜಿಎಂ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.
ಇದನ್ನೂ ಓದಿ : ಇಂದಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ – 12 ತಂಡಗಳ ಕದನಕ್ಕೆ ವೇದಿಕೆ ಸಿದ್ದ!



















