ಬರ್ಮಿಂಗ್‌ಹ್ಯಾಮ್ : ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇಂದಿನಿಂದ ಆರಂಭವಾಗಲಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 12 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ.
ಇಂಗ್ಲೆಂಡ್ ಹಾಗೂ ವೇಲ್ಸ್‌ನ ಜಂಟಿ ಆತಿಥ್ಯದಲ್ಲಿ ಟೂರ್ನಿ ಆರಂಭವಾಗಲಿದೆ. 2 ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯು ಈ ಬಾರಿ 2 ದೇಶಗಳ 7 ಕ್ರೀಡಾಂಗಣದಲ್ಲಿ 33 ಪಂದ್ಯಗಳು ನಡೆಯಲಿದ್ದು, ಜು.5ರಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ 12 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ತಲಾ 6 ತಂಡಗಳಂತೆ ಎರಡು ಗ್ರೂಪ್‌ಗಳಾಗಿ ವಿಂಗಡಿಸಲಾಗಿದೆ.
ಭಾರತ ತಂಡಕ್ಕೆ ಮೊದಲ ಸವಾಲಾಗಿ ಬದ್ಧವೈರಿ ಪಾಕಿಸ್ತಾನ ಎದುರಾಗಲಿದೆ. ಕಳೆದ ವರ್ಷವಷ್ಟೇ ಏಕದಿನ ವಿಶ್ವಕಪ್ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆ, ಈಗ ಚುಟುಕು ಕ್ರಿಕೆಟ್‌ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಲು ಸಜ್ಜಾಗಿದೆ.
ಜೂ.14ರಂದು ಬರ್ಮಿಂಗ್‌ಹ್ಯಾಮ್‌ನ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತ ತಂಡವನ್ನು ಮುನ್ನಡೆಸಲು ಹರ್ಮನ್ ಪ್ರೀತ್ ಕೌರ್ ಸಜ್ಜಾಗಿದ್ದಾರೆ. ಇವರಿಗೆ ಸಾಥ್ ನೀಡಲು ಸ್ಮೃತಿ ಮಂಧನಾ, ಶಫಾಲಿ ವರ್ಮಾ, ರಿಚಾ ಘೋಷ್, ಜೆಮಿಮಾ ಹಾಗೂ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ತಂಡದ ಭಾಗವಾಗಿದ್ದಾರೆ.
ಗೆದ್ದ ತಂಡಕ್ಕೆ 22.4 ಕೋಟಿ ರೂ.:
ಈ ಬಾರಿ ಮಹಿಳಾ ವಿಶ್ವಕಪ್‌ಗೆ ಐಸಿಸಿ ಬರೋಬ್ಬರಿ ಒಟ್ಟು 83.93 ಕೋಟಿ ರೂ. ಪ್ರಕಟಿಸಿದ್ದು, ಅದರಲ್ಲಿ ಗೆದ್ದ ತಂಡಕ್ಕೆ 22.4 ಕೋಟಿ ರೂ. ಸಿಗಲಿದೆ. ರನ್ನರ್ ಅಪ್ ಆದ ತಂಡಕ್ಕೆ 11.2 ಕೋಟಿ ರೂ. ಹಾಗೂ ಸೆಮಿಫೈನಲ್‌ನಲ್ಲಿ ಸೋಲುವ 2 ತಂಡಗಳಿಗೆ ತಲಾ 6.46 ಕೋಟಿ ರೂ. ಸಿಗಲಿದೆ. ಗುಂಪು ಹಂತದ ಪಂದ್ಯದಲ್ಲಿ ಗೆಲ್ಲುವ ತಂಡಗಳಿಗೆ ತಲಾ 29 ಲಕ್ಷ ರೂ. ಸಿಗಲಿದೆ.
ಇದನ್ನೂ ಓದಿ : ಕೇವಲ ಸಿಕ್ಸರ್‌ಗಳ ಸರದಾರನಲ್ಲ : ವಿಭಿನ್ನ ಬ್ಯಾಟಿಂಗ್ ಶೈಲಿ ಪ್ರದರ್ಶಿಸಿ ಪ್ರಬುದ್ಧತೆ ಮೆರೆದ ಸೂರ್ಯವಂಶಿ



















