ಜೋರ್ಹತ್ : ಭಾರತೀಯ ವಾಯುಪಡೆಗೆ (IAF) ಸೇರಿದ ಎಎನ್-32 (AN-32) ಸರಕು ಸಾರಿಗೆ ವಿಮಾನವೊಂದು ಶನಿವಾರ ಅಸ್ಸಾಂನ ಜೋರ್ಹತ್‌ನ ವಾಯುನೆಲೆಯ ಆವರಣದಲ್ಲೇ ಪತನಗೊಂಡಿದೆ. ಅಪಘಾತದ ತೀವ್ರತೆಗೆ ವಿಮಾನದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಜೋರ್ಹತ್ ವಾಯುಪಡೆ ನಿಲ್ದಾಣದ ಒಳಭಾಗದಲ್ಲೇ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ರನ್‌ವೇ ಬಳಿ ವಿಮಾನ ಪತನಗೊಳ್ಳುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ. ಘಟನೆ ಸಂಭವಿಸುತ್ತಿದ್ದಂತೆ ಅಲರ್ಟ್ ಆದ ತುರ್ತು ಸ್ಪಂದನಾ ತಂಡಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರುವಲ್ಲಿ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾವು-ನೋವಿನ ವಿವರ ಅಸ್ಪಷ್ಟ
ಈ ಭೀಕರ ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ವಿಮಾನದಲ್ಲಿದ್ದ ಸಿಬ್ಬಂದಿಯ ಸ್ಥಿತಿ ಹಾಗೂ ಸಾವು-ನೋವುಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಭಾರತೀಯ ವಾಯುಪಡೆಯು ಘಟನೆಯನ್ನು ದೃಢಪಡಿಸಿದ್ದು, ಪರಿಸ್ಥಿತಿಯ ಸಂಪೂರ್ಣ ಮೌಲ್ಯಮಾಪನ ನಡೆದ ನಂತರವಷ್ಟೇ ಹೆಚ್ಚಿನ ವಿವರಗಳನ್ನು ನೀಡುವುದಾಗಿ ತಿಳಿಸಿದೆ. ಸದ್ಯ ಅಪಘಾತದ ಕುರಿತು ವಾಯುಪಡೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ತನಿಖೆಯ ಬಳಿಕವಷ್ಟೇ ಎಎನ್-32 ವಿಮಾನ ದುರಂತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಬೇರೆನಾದರೂ ಸಮಸ್ಯೆಯೇ ಎಂಬುದು ಸ್ಪಷ್ಟವಾಗಲಿದೆ.
ಮುನ್ನೆಲೆಗೆ ಬಂದ ಹಳೆಯ ಕಹಿ ನೆನಪುಗಳು
ಅಸ್ಸಾಂನಲ್ಲಿ ಇಂತಹದೊಂದು ವಾಯುಪಡೆ ವಿಮಾನ ದುರಂತ ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಕೆಲವು ತಿಂಗಳ ಹಿಂದಷ್ಟೇ ಇಲ್ಲಿನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವಾಯುಪಡೆಯ ಸುಖೋಯ್ (Su-30MKI) ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದರು. ಅಂದು ಸಹ ಇದೇ ಜೋರ್ಹತ್ ವಾಯುನೆಲೆಯಿಂದ ವಾಡಿಕೆಯ ಹಾರಾಟ ನಡೆಸಿದ್ದ ಸುಖೋಯ್ ವಿಮಾನ, ತದನಂತರ ಸಂಪರ್ಕ ಕಳೆದುಕೊಂಡು ಜೋರ್ಹತ್‌ನಿಂದ 60 ಕಿ.ಮೀ ದೂರದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿತ್ತು.
ಇದನ್ನೂ ಓದಿ : ಮತ್ತೆ ಮುತ್ತಪ್ಪ ರೈ ಪುತ್ರನ ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪುಂಡಾಟ – ಸೈಲೆನ್ಸರ್‌ನಲ್ಲಿ ಬೆಂಕಿ ಉಗುಳುತ್ತಾ ಡ್ರೈವ್!


















