ನವದೆಹಲಿ : ತಾಂತ್ರಿಕ ದೋಷದ ಕಾರಣಕ್ಕೆ ಅರಬ್ಬಿ ಸಮುದ್ರದಲ್ಲಿ ನಡುನೀರಿನಲ್ಲಿ ಸಿಲುಕಿದ್ದ ಭಾರತೀಯ ಸರಕು ಸಾಗಣೆ ಹಡಗೊಂದಕ್ಕೆ ಪಾಕಿಸ್ತಾನದ ನೌಕಾಪಡೆಯು ತುರ್ತು ಕಾರ್ಯಾಚರಣೆ ನಡೆಸಿ ನೆರವು ನೀಡಿದೆ.
‘ಎಂವಿ ಗೌತಮ್’ (MV Gautam) ಹೆಸರಿನ ಈ ಹಡಗಿನಲ್ಲಿ 6 ಮಂದಿ ಭಾರತೀಯರು ಹಾಗೂ ಒಬ್ಬ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಒಟ್ಟು ಏಳು ಜನ ಸಿಬ್ಬಂದಿ ಇದ್ದರು. ಮುಂಬೈನ ಕಡಲ ರಕ್ಷಣಾ ಮತ್ತು ಸಮನ್ವಯ ಕೇಂದ್ರದ (MRCC) ತುರ್ತು ಮನವಿಯ ಮೇರೆಗೆ ಪಾಕಿಸ್ತಾನ ಈ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಸಿಬ್ಬಂದಿಯ ರಕ್ಷಣೆಗೆ ಧಾವಿಸಿದೆ.
ಮಧ್ಯದಲ್ಲೇ ಕೈಕೊಟ್ಟ ಜನರೇಟರ್
ಒಮಾನ್‌ನಿಂದ ಭಾರತದತ್ತ ಪ್ರಯಾಣ ಬೆಳೆಸಿದ್ದ ‘ಎಂವಿ ಗೌತಮ್’ ಹಡಗಿನಲ್ಲಿ ಮೇ 3ರಂದು ಜನರೇಟರ್ ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಹಡಗು ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಶೋಧ ಮತ್ತು ರಕ್ಷಣಾ ಪ್ರದೇಶದ (SRR) ವ್ಯಾಪ್ತಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು. ಹಡಗಿನಲ್ಲಿದ್ದ ಸಿಬ್ಬಂದಿ ತುರ್ತು ಸಂದೇಶ (SOS) ರವಾನಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈನ ಕಡಲ ರಕ್ಷಣಾ ನಿಯಂತ್ರಣ ಕೊಠಡಿಯ ಅಧಿಕಾರಿಗಳು, ತುರ್ತು ನೆರವಿಗಾಗಿ ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿದರು.

ಪಾಕ್ ನೌಕಾಪಡೆಯಿಂದ ತ್ವರಿತ ಸ್ಪಂದನೆ
ಭಾರತದ ಮನವಿಗೆ ತಕ್ಷಣ ಸ್ಪಂದಿಸಿದ ಪಾಕಿಸ್ತಾನ, ‘ಪಿಎಂಎಸ್ಎಸ್ ಕಾಶ್ಮೀರ್’ ಎಂಬ ನೌಕೆಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸಿಕೊಟ್ಟಿತು. ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆಯ (PMSA) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಪಾಕ್ ನೌಕಾಪಡೆ, ಸಂಕಷ್ಟದಲ್ಲಿದ್ದ ಹಡಗಿನ ಸಿಬ್ಬಂದಿಗೆ ತುರ್ತಾಗಿ ಆಹಾರ, ವೈದ್ಯಕೀಯ ನೆರವು ಹಾಗೂ ತಾಂತ್ರಿಕ ಬೆಂಬಲವನ್ನು ಒದಗಿಸಿದೆ. ಹಡಗನ್ನು ಪರಿಶೀಲಿಸಿದ ಪಾಕಿಸ್ತಾನದ ತಾಂತ್ರಿಕ ಸಿಬ್ಬಂದಿ, ಅದಲ್ಲಿದ್ದ ಮುಖ್ಯ ಜನರೇಟರ್ ಅನ್ನು ಸ್ಥಳದಲ್ಲೇ ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿದರು. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಗಲ್ಫ್ ಟೈಮ್ಸ್ ಹಂಚಿಕೊಂಡಿದ್ದು, ಪಾಕ್ ಪಡೆಗಳು ಭಾರತೀಯ ಹಡಗಿನ ಸಿಬ್ಬಂದಿಗೆ ನೆರವಾಗುತ್ತಿರುವ ದೃಶ್ಯಗಳು ಸೆರೆಯಾಗಿವೆ.
ಭಾರತೀಯ ಕರಾವಳಿ ರಕ್ಷಕ ಪಡೆ ನಿಗಾ
ವಿದ್ಯುತ್ ಸಂಪರ್ಕವಿಲ್ಲದೆ ಸಮುದ್ರದ ಅಲೆಗಳ ಅಬ್ಬರಕ್ಕೆ ನಿಧಾನವಾಗಿ ತೇಲುತ್ತಾ ಬಂದ ಹಡಗು, ಮೇ 4ರ ರಾತ್ರಿಯ ಹೊತ್ತಿಗೆ ಗುಜರಾತ್‌ನ ದ್ವಾರಕಾ ಲೈಟ್‌ಹೌಸ್‌ನಿಂದ ಸುಮಾರು 262 ನಾಟಿಕಲ್ ಮೈಲಿ ದೂರದಲ್ಲಿರುವ ಭಾರತದ ಜಲಪ್ರದೇಶವನ್ನು ಪ್ರವೇಶಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಕರಾವಳಿ ರಕ್ಷಕ ಪಡೆ (ICG), ತನ್ನ ‘ರಾಜರತನ್’ ನೌಕೆಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದೆ.
ಹಡಗಿನಲ್ಲಿ ವಿದ್ಯುತ್ ಇಲ್ಲದ ಕಾರಣ ಕೇವಲ ಬ್ಯಾಟರಿ ಆಧಾರಿತ ವಿಎಚ್‌ಎಫ್ (VHF) ರೇಡಿಯೋ ಮೂಲಕ ಮಾತ್ರ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ಸದ್ಯ ಹಡಗಿನಲ್ಲಿ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಹಾಗೂ ಇಂಜಿನ್ ಕಾರ್ಯನಿರ್ವಹಿಸದೇ ಇರುವುದರಿಂದ, ಸಮುದ್ರ ಮಾರ್ಗದಲ್ಲಿ ಸಂಚರಿಸುವ ಇತರ ಹಡಗುಗಳಿಗೆ ಇದು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಹೀಗಾಗಿ, ಹಡಗನ್ನು ಸುರಕ್ಷಿತವಾಗಿ ದಡಕ್ಕೆ ಎಳೆತರಲು ಸೂಕ್ತ ಟಗ್ ಬೋಟ್ ವ್ಯವಸ್ಥೆ ಮಾಡುವಂತೆ ಹಡಗಿನ ಮಾಲೀಕರಿಗೆ ಸೂಚನೆ ನೀಡಲು ಮುಂಬೈನ ಹಡಗು ಸಾಗಣೆ ನಿರ್ದೇಶನಾಲಯಕ್ಕೆ ಕೋಸ್ಟ್ ಗಾರ್ಡ್ ಮನವಿ ಮಾಡಿದೆ.
ಇದನ್ನೂ ಓದಿ : ರೇಂಜ್ ರೋವರ್ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ!



















