ಸೇಲಂ : ತಮಿಳುನಾಡಿನ ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ 9 ಮಂದಿ ಪ್ರವಾಸಿಗರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ಕಳೆದುಕೊಂಡು ವಾಹನಗಳಿಗೆ ಡಿಕ್ಕಿ ಹೊಡೆದು ಕಮರಿಗೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರೆಲ್ಲರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು ಎಂಬುದು ಮತ್ತಷ್ಟು ಆಘಾತಕಾರಿ ಸಂಗತಿಯಾಗಿದೆ.
ಕೊಯಮತ್ತೂರಿನಿಂದ ಸೇಲಂ ಕಡೆಗೆ ತೆರಳುತ್ತಿದ್ದ ಬಸ್ 13ನೇ ಹೇರ್‌ಪಿನ್ ತಿರುವಿನಲ್ಲಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯಿಂದ ದಿಢೀರ್ ಪಕ್ಕಕ್ಕೆ ಸರಿದ ಬಸ್, ದ್ವಿಚಕ್ರ ವಾಹನ ಹಾಗೂ ಸುಮಾರು 10 ಪ್ರಯಾಣಿಕರಿದ್ದ ಆಟೋರಿಕ್ಷಾಗೆ ಗುದ್ದಿದೆ. ಬಳಿಕ ನೇರವಾಗಿ 9 ನೇ ಹೇರ್‌ಪಿನ್ ತಿರುವಿಗೆ ಉರುಳಿ ಬಿದ್ದಿದೆ. ಈ ಬಸ್ಸಿನಲ್ಲಿ ಕೇರಳದ ಪೆರಿಂತಲ್ಮಣ್ಣದಿಂದ ಆಗಮಿಸಿದ್ದ 13 ಮಂದಿ ಪ್ರವಾಸಿಗರಿದ್ದರು ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.
ಸ್ಥಳದಲ್ಲೇ 8 ಮಂದಿ ಸಾವು
ಈ ಭೀಕರ ದುರಂತದಲ್ಲಿ 13 ಮಂದಿ ಪ್ರವಾಸಿಗರ ಪೈಕಿ 8 ಜನ (ಒಬ್ಬ ಪುರುಷ ಮತ್ತು ಏಳು ಮಹಿಳೆಯರು) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್ ಚಾಲಕ, 17 ಮತ್ತು 18 ವರ್ಷದ ಇಬ್ಬರು ಬಾಲಕರು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ತಕ್ಷಣವೇ ರಕ್ಷಿಸಿ ಪೊಳ್ಳಾಚ್ಚಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಾಯಾಳುಗಳಲ್ಲಿ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮಾಹಿತಿ ತಿಳಿದ ತಕ್ಷಣ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಶೋಕಸಾಗರದಲ್ಲಿ ಮಲಪ್ಪುರಂ ಶಾಲೆ
ಮೃತರೆಲ್ಲರೂ ಕೇರಳದ ಮಲಪ್ಪುರಂನ ಪಾಂಗ್-ಪಲ್ಲಿಪರಂಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಕಾರಣ, ಇಡೀ ಶಾಲಾ ಆವರಣ ಹಾಗೂ ಮೃತರ ಸ್ವಗ್ರಾಮಗಳು ಶೋಕಸಾಗರದಲ್ಲಿ ಮುಳುಗಿವೆ. ಪ್ರವಾಸಕ್ಕೆಂದು ತೆರಳಿದ್ದ ಶಿಕ್ಷಕರು ಶವವಾಗಿ ಹಿಂದಿರುಗುತ್ತಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಮುಗಿಲು ಮುಟ್ಟಿದೆ.
ಈ ಭೀಕರ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. “ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಅಪಘಾತದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಈ ದುರ್ಘಟನೆಗೆ ತೀವ್ರ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ‘ಈ ಬಾರಿ ಆಸ್ಟ್ರೇಲಿಯಾವನ್ನು ಕೇಳುವ ಅಗತ್ಯವಿಲ್ಲ’ ; GT ವಿರುದ್ಧ ಗ್ರೀನ್ ಬೌಲಿಂಗ್ ಮಾಡದ ರಹಸ್ಯ ಬಿಚ್ಚಿಟ್ಟ ರಹಾನೆ!



















