ಲಂಡನ್ : ಲಂಡನ್‌ನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ವೊಂದರ 36ನೇ ಮಹಡಿಯಿಂದ ಬಿದ್ದು ಭಾರತೀಯ ಮೂಲದ ದಂಪತಿ ಹಾಗೂ ಅವರ 9 ವರ್ಷದ ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಂಬೈ ಮೂಲದ ರಾಕೇಶ್ ಪೈ (47), ಅದಿತಿ ಪರಾಲ್ಕರ್ (46) ಮತ್ತು ಅವರ ಒಂಬತ್ತು ವರ್ಷದ ಮಗ ಸಿದ್, ಲಂಡನ್‌ನ ‘ಅಂಕಲ್’ ಟವರ್ ಬ್ಲಾಕ್‌ನ ತಮ್ಮ ಫ್ಲ್ಯಾಟ್‌ನ ಬಾಲ್ಕನಿಯಿಂದ ಬಿದ್ದು ಮೇ 27ರಂದು ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.
ಮಗನ ಗುಣಪಡಿಸಲಾಗದ ಕಾಯಿಲೆಯಿಂದ ಬೇಸತ್ತು ದಂಪತಿ ಈ ತೀವ್ರ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದ್ದರೂ, ಅವರ ಆಪ್ತರು ಮಾತ್ರ ಇದು ಆತ್ಮಹತ್ಯೆ ಆಗಿರಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಮೃತ ರಾಕೇಶ್ ಪೈ ಮತ್ತು ಅದಿತಿ ಪರಾಲ್ಕರ್ 2000ರ ದಶಕದಲ್ಲಿ ಮುಂಬೈನಿಂದ ಲಂಡನ್‌ಗೆ ವಲಸೆ ಹೋಗಿ ಅಲ್ಲಿ ಯಶಸ್ವಿ ವೃತ್ತಿಬದುಕು ಕಟ್ಟಿಕೊಂಡಿದ್ದರು.

ರಾಕೇಶ್ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರೆ, ಅದಿತಿ ನಿರ್ಮಾಣ ವಲಯದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಆದರೆ, ಅವರ ಮಗ ಸಿದ್ ಹುಟ್ಟಿನಿಂದಲೇ ಕಿಡ್ನಿ ವೈಫಲ್ಯ ಸೇರಿದಂತೆ ಅನೇಕ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ. ಅವನಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಆತನಿಗೆ ಲಂಡನ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದಾಗ, ಸುಮಾರು ಆರು ವರ್ಷಗಳ ಹಿಂದೆ ಈ ದಂಪತಿ ಮುಂಬೈಗೆ ಮರಳಿದ್ದರು. ಆದರೆ ಅಲ್ಲಿನ ವೈದ್ಯರೂ ಕೂಡ ಮಗನ ಕಾಯಿಲೆಗೆ ಮುಂದೆ ಯಾವುದೇ ಚಿಕಿತ್ಸಾ ಆಯ್ಕೆಗಳಿಲ್ಲ ಎಂದು ಕೈಚೆಲ್ಲಿದ ನಂತರ, ದಂಪತಿ ಮತ್ತೆ ಯುಕೆಗೆ ಮರಳಿದ್ದರು.
ಮಾನಸಿಕ ಒತ್ತಡವೇ ಮುಳುವಾಯ್ತೇ?
ಬರ್ಮಾಂಡ್ಸೆ ಮತ್ತು ಓಲ್ಡ್ ಸೌತ್‌ವಾರ್ಕ್‌ನ ಲೇಬರ್ ಪಕ್ಷದ ಸಂಸದ ನೀಲ್ ಕಾಯ್ಲ್ ಈ ಘಟನೆಯನ್ನು ಅತ್ಯಂತ ಭೀಕರ ದುರಂತ ಎಂದು ಕರೆದಿದ್ದಾರೆ. ಮಗನ ಪರಿಸ್ಥಿತಿಯೇ ದಂಪತಿ ಈ ಭೀಕರ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಮಗನಿಗೆ ಮನೆಯಲ್ಲೇ ಶಿಕ್ಷಣ ನೀಡುತ್ತಾ, ಆತನ ಸಂಪೂರ್ಣ ಆರೈಕೆ ಮಾಡುತ್ತಿದ್ದ ಅದಿತಿ ಅವರಿಗೆ ಲಂಡನ್‌ನಲ್ಲಿ ಯಾವುದೇ ಕುಟುಂಬದ ಬೆಂಬಲವಿರಲಿಲ್ಲ. ತಮ್ಮ ಕಠಿಣ ಕೆಲಸದ ಜೊತೆಗೆ ಮಗನನ್ನು ನಿಭಾಯಿಸುವುದು ಅವರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕೊನೆಗೆ ಒತ್ತಡವನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿರಬಹುದು ಎಂದು ಕುಟುಂಬದ ಆಪ್ತರೊಬ್ಬರು ತಿಳಿಸಿದ್ದಾರೆ.
ಲಂಡನ್ ಪೊಲೀಸರಿಂದ ತನಿಖೆ
ಈ ಘಟನೆಯನ್ನು ಕಣ್ಣಾರೆ ಕಂಡ ಕೆಲವು ಸ್ಥಳೀಯ ನಿವಾಸಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸದ್ಯಕ್ಕೆ ಲಂಡನ್ ಪೊಲೀಸರು ಈ ಸಾವುಗಳನ್ನು “ಅನಿರೀಕ್ಷಿತ” ಎಂದು ವರ್ಗೀಕರಿಸಿದ್ದು, ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಮೃತರ ಹತ್ತಿರದ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರಿಗೆ ನೆರವು ನೀಡಲು ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಉನ್ನತ ಮಟ್ಟದ ಜೀವನ ನಡೆಸುತ್ತಿದ್ದ ಭಾರತೀಯ ಕುಟುಂಬವೊಂದು ಈ ರೀತಿ ದುರಂತ ಅಂತ್ಯ ಕಂಡಿರುವುದು ಲಂಡನ್ ಹಾಗೂ ಮುಂಬೈನಲ್ಲಿರುವ ಅವರ ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ತಂದಿಟ್ಟಿದೆ.
ಇದನ್ನೂ ಓದಿ : ನೈಟ್‌ಕ್ಲಬ್ ಗಲಾಟೆ : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸ್ತಾರಾ ಬೆನ್ ಸ್ಟೋಕ್ಸ್?



















