ಬೆಂಗಳೂರು : ನಗರದಲ್ಲಿ ಕುಡಿದ ಮತ್ತಿನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸ್ನೇಹಿತನ ಮೊಬೈಲ್ ಬಚ್ಚಿಟ್ಟಿದ್ದ ವಿಚಾರವಾಗಿ ಆರಂಭವಾದ ವಾಗ್ವಾದ ಕೊನೆಗೆ ಚಾಕು ಇರಿತಕ್ಕೆ ತಿರುಗಿದ್ದು, ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡೇಶ್ವರಿ ರಸ್ತೆಯ ಬೆಸ್ಕಾಂ ಕಚೇರಿ ಸಮೀಪದ ಬಾಡಿಗೆ ಮನೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಲ್ಲಿ ಮೃತಪಟ್ಟ ಯುವಕನನ್ನು ಪರಶುರಾಮ್ ಎಲ್ಲಪ್ಪ ಮಂಗಳಗಟ್ಟಿ (25) ಎಂದು ಗುರುತಿಸಲಾಗಿದೆ. ಆರೋಪಿ ರಾಮು ಹಾಗೂ ಮೃತ ಪರಶುರಾಮ್ ಇಬ್ಬರೂ ಹುಬ್ಬಳ್ಳಿ ಮೂಲದವರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರೂ ಒಂದೇ ರೂಂನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ಮೇ 10ರಂದು ಬೆಳಗಿನ ಜಾವ ನೈಟ್ ಶಿಫ್ಟ್ ಮುಗಿಸಿಕೊಂಡು ಬಂದ ಆರೋಪಿ ರಾಮು ಮದ್ಯ ಸೇವಿಸಿದ್ದ ಎನ್ನಲಾಗಿದೆ. ಮನೆಗೆ ಬಂದ ನಂತರ ಪರಶುರಾಮ್ ಅವರ ಮೊಬೈಲ್‌ನ್ನು ಬಚ್ಚಿಟ್ಟಿದ್ದಾನೆ. ಬಳಿಕ “ಮೊಬೈಲ್ ಎಲ್ಲಿಟ್ಟಿದ್ದೀಯ, ಕೊಡು” ಎಂದು ಪರಶುರಾಮ್ ಕೇಳಿದಾಗ ಕೊಡಲ್ಲ ಎಂದು ರಾಮು ಹೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ತೀವ್ರಗೊಂಡಿದೆ.
ಜಗಳ ತಾರಕಕ್ಕೇರುತ್ತಿದ್ದಂತೆ ಆರೋಪಿ ರಾಮು ಕಿಚನ್‌ಗೆ ಹೋಗಿ ಚಾಕು ತೆಗೆದುಕೊಂಡು ಬಂದಿದ್ದಾನೆ. ಬಳಿಕ ಏಕಾಏಕಿ ಪರಶುರಾಮ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಚಾಕು ಇರಿತದಿಂದ ಪರಶುರಾಮ್ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆರೋಪಿ ತನ್ನ ಹಾಗೂ ಮೃತನ ಮೊಬೈಲ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪರಶುರಾಮ್‌ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಹುಬ್ಬಳ್ಳಿಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪರಶುರಾಮ್ ಮೃತಪಟ್ಟಿದ್ದಾನೆ. ಯುವಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಳಿಕ ಮೃತನ ಸಹೋದರ ಗಂಗಪ್ಪ ಎಲ್ಲಪ್ಪ ಮಂಗಳಗಟ್ಟಿ ಮಾರತ್ತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯ ಚಲನವಲನಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಪರಾರಿಯಾಗಿರುವ ಆರೋಪಿ ರಾಮುಗಾಗಿ ಮಾರತ್ತಹಳ್ಳಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ : ಧಾರವಾಡದ ಐಐಟಿಯಲ್ಲಿ 2 ಲೈಬ್ರರಿ ಟ್ರೈನಿ ಹುದ್ದೆಗಳ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ



















