ಕಲಬುರಗಿ : ಜಿಲ್ಲೆಯ ಅಫಜಲಪುರ ತಾಲೂಕಿನ ಅಳಗಿ (ಕೆ) ಗ್ರಾಮದಲ್ಲಿ ಜೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಮಾಯಕ ರೈತನೊಬ್ಬ ಪ್ರಾಣ ಕಳೆದುಕೊಂಡಿರುವ ಆರೋಪ ಕೇಳಿಬಂದಿದೆ. ಬಸಪ್ಪ ಕಲ್ಲೂರ್ (45) ಎಂಬ ರೈತ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದು, ಈ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಗ್ರಾಮದ ವಿದ್ಯುತ್ ಸಮಸ್ಯೆ ಸರಿಪಡಿಸಲು ಗುಂಡೋಜಿ ಎಂಬ ಲೈನ್‌ಮ್ಯಾನ್ ಸ್ಥಳಕ್ಕೆ ಬಂದಿದ್ದ. ಆದರೆ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸದೇ, ತಾನೇ ಕಂಬ ಏರಿ ಕೆಲಸ ಮಾಡುವ ಬದಲು ರೈತ ಬಸಪ್ಪ ಕಲ್ಲೂರ್ ಅವರನ್ನು ವಿದ್ಯುತ್ ಕಂಬಕ್ಕೆ ಹತ್ತುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ. ಲೈನ್‌ಮ್ಯಾನ್ ಮಾತು ನಂಬಿ ಕಂಬ ಹತ್ತಿದ ರೈತ ವಿದ್ಯುತ್ ಶಾಕ್‌ಗೆ ಒಳಗಾಗಿ ಮೇಲಿನಿಂದ ಕೆಳಗೆ ಬಿದ್ದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಬಸಪ್ಪ ಅವರನ್ನು ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆ ಬಳಿಕ ಲೈನ್‌ಮ್ಯಾನ್ ಸ್ಥಳದಿಂದ ತೆರಳಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ರೈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರು ಅಫಜಲಪುರ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಈ ಸಾವಿನ ಹೊಣೆ ಹೊತ್ತು, ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ; ಮೃತದೇಹವನ್ನು ಮರಕ್ಕೆ ನೇಣು ಹಾಕಿ ಹಂತಕರು ಪರಾರಿ!



















