ಬೆಂಗಳೂರು : ಭಾರತೀಯ ಜೀವವಿಮಾ ನಿಗಮದ (LIC) ಎಲ್ಐಸಿ ಗೋಲ್ಡನ್ ಜುಬಿಲಿ ಫೌಂಡೇಷನ್ ವತಿಯಿಂದ 2026-27ನೇ ಸಾಲಿನ ‘ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ ಶಿಪ್’ (LIC Golden Jubilee Scholarship Scheme 2026) ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸಲು ಈ ವಿದ್ಯಾರ್ಥಿವೇತನವು ಅತ್ಯಂತ ಸಹಕಾರಿಯಾಗಿದೆ. ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಪದವಿ ಸೇರಿ ಯಾವುದೇ ಉನ್ನತ ಶಿಕ್ಷಣ ಕೋರ್ಸ್ ಗೆ ಪ್ರವೇಶ ಪಡೆದವರು ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿದ್ದಾರೆ. ಅರ್ಹ ಅಭ್ಯರ್ಥಿಗಳು ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕಗಳನ್ನು ಗಳಿಸಿರಬೇಕು. ಅಲ್ಲದೆ, ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 4.50 ಲಕ್ಷ ರೂ. ಮೀರಬಾರದು ಎಂದು ಎಲ್ಐಸಿ ತಿಳಿಸಿದೆ.
ವೈದ್ಯಕೀಯ (MBBS, BDS ಇತ್ಯಾದಿ), ಎಂಜಿನಿಯರಿಂಗ್ (BE, B.Tech), ಸ್ನಾತಕೋತ್ತರ ಅಥವಾ ಪದವಿ ಕೋರ್ಸ್ ಗಳು ಹಾಗೂ ವೃತ್ತಿಪರ (Vocational/Diploma) ಕೋರ್ಸ್ ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 15,000 ರೂ. ನಿಂದ 50,000 ರೂ.ವರೆಗೆ ಆರ್ಥಿಕ ಸಹಾಯ ನೀಡಲಾಗುತ್ತದೆ.
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಎಲ್ಐಸಿ ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು 2026ರ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ https://licindia.in/golden-jubilee-foundation ಗೆ ಭೇಟಿ ನೀಡಬಹುದು. ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಇದನ್ನೂ ಓದಿ : ಸೈನಿಕ ಶಾಲೆಯಲ್ಲಿ 17 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ : 47 ಸಾವಿರ ರೂ. ಸಂಬಳ



















