ರಾಜ್ಯ ಸರ್ಕಾರವು ಕಳೆದ ಜೂನ್ ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡದ ಹಿನ್ನೆಲೆ, ಐದು ತಿಂಗಳಾದರೂ ವೇತನವಿಲ್ಲದೆ ಜೀವನ ನಡೆಸಲು ಉಪನ್ಯಾಸಕರು ಪರದಾಡುವಂತಾಗಿದೆ. ದಸರಾ ಹಬ್ಬಕ್ಕೂ ಸಂಬಳ ಸಿಕ್ಕಿಲ್ಲ, ಇತ್ತ ದೀಪಾವಳಿಗೂ ವೇತನ ಸಿಗುವ ನಿರೀಕ್ಷೆ ಇಲ್ಲದೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಲ್ಲಿಸಿ ಉಪನ್ಯಾಸಕರು ಸುಸ್ತಾಗಿದ್ದಾರೆ.
ಹೊಸದಾಗಿ ಕಾಲೇಜುಗಳಿಗೆ ನೇಮಕಗೊಂಡ ಸುಮಾರು 1,000 ಅತಿಥಿ ಉಪನ್ಯಾಸಕರಿಗೂ ಸಂಬಳ ಬಾಕಿ ಉಳಿದಿದ್ದು, ತಿಂಗಳಿಗೆ ಸಿಗುವ ಕೇವಲ 14 ಸಾವಿರ ರೂಪಾಯಿ ಸಂಬಳವೂ ಐದು ತಿಂಗಳಿಂದ ಪಾವತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡು ಒಂದು ವಾರದೊಳಗೆ ಬಾಕಿ ಸಂಬಳ ಪಾವತಿಸುವಂತೆ ಸರ್ಕಾರಕ್ಕೆ ಗಡುವು ನೀಡಲಾಗಿದ್ದು, ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.


















