ನಾಗಮಂಗಲದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಎಡವಟ್ಟು ಮುಂದುವರಿದಿದ್ದು, ಈ ಹಿಂದೆ ಕಸದ ತೊಟ್ಟಿಗೆ ದಾಖಲೆಗಳನ್ನು ಎಸೆದಿದ್ದ ಸಿಬ್ಬಂದಿ, ಇದೀಗ ಜಿಲ್ಲಾ ಪಂಚಾಯತಿ ಅನುದಾನದ ಮಹತ್ವದ ಸರ್ಕಾರಿ ದಾಖಲೆಗಳನ್ನು ಗುಜರಿಗೆ ಹಾಕಲು ಯತ್ನಿಸಿದ್ದಾರೆ. ಕಸ ವಿಲೇವಾರಿ ನೆಪದಲ್ಲಿ ಕಚೇರಿಯ ಅಕ್ರಮದ ದಾಖಲೆಗಳನ್ನು ನಾಶಪಡಿಸುವ ಕೆಲಸ ನಡೆಯುತ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದ್ದು, ಆಟೋಗೆ ದಾಖಲೆಗಳನ್ನು ತುಂಬುವ ವೇಳೆ ಸಾರ್ವಜನಿಕರು ಸಿಬ್ಬಂದಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೇಲಧಿಕಾರಿಗಳ ಸೂಚನೆಯಂತೆಯೇ ಕಸ ಎಂದು ಗುಜರಿಗೆ ಹಾಕುತ್ತಿದ್ದೇವೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದ್ದು, ಸರ್ಕಾರಿ ಕಾಗದಪತ್ರಗಳನ್ನು ಈ ರೀತಿ ಗುಜರಿಗೆ ಮಾರಾಟ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



















