ದೀಪಾವಳಿ ಹಬ್ಬಕ್ಕೂ ಮುನ್ನವೇ ಸಾರ್ವಜನಿಕರಿಗೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯ ಮತ್ತೊಂದು ಭಾರಿ ಶಾಕ್ ಎದುರಾಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಸಂಬಂಧ ಇಂದು ಸಂಜೆ ಬೆಂಗಳೂರಿನಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ಮಹತ್ವದ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ. ಸಾರಿಗೆ ನಿಗಮಗಳು ತೀವ್ರ ಆರ್ಥಿಕ ನಷ್ಟದಲ್ಲಿದ್ದು, ಬಸ್ಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಒದಗಿಸಲೂ ಹಣವಿಲ್ಲದಂತಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನಾಲ್ಕು ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆಯಲಿರುವ ಇಂದಿನ ಸಭೆಯಲ್ಲಿ ಪ್ರತಿ ಸ್ಟೇಜ್ ಆಧರಿತವಾಗಿ ಟಿಕೆಟ್ ದರ ಏರಿಕೆ ಮಾಡುವ ಬಗ್ಗೆ ಚರ್ಚಿಸಿ, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಲಾಗುವುದು ಎಂಬುದನ್ನು ಇಂದು ಸಂಜೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

















