ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕ್ರಮ ವಿಳಂಬ ಮಾಡಿರುವ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ವೆ ನಡೆಸಿ ಗುರುತಿನ ಚೀಟಿ (ಐಡಿ ಕಾರ್ಡ್) ನೀಡುವುದಾಗಿ, ವ್ಯಾಪಾರಕ್ಕೆ ಸ್ಥಳ ಗುರುತಿಸಿ ಅಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವುದಾಗಿ ಘೋಷಿಸಿದ್ದರೂ, ಬಹುತೇಕ ಭರವಸೆಗಳು ಇನ್ನೂ ಅನುಷ್ಠಾನಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬೀದಿ ಬದಿ ವ್ಯಾಪಾರಿಗಳ ಸರ್ವೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಸರ್ವೆ ಪೂರ್ಣಗೊಂಡಿದ್ದರೂ ಇದುವರೆಗೆ ಹೆಚ್ಚಿನ ವ್ಯಾಪಾರಿಗಳಿಗೆ ಐಡಿ ಕಾರ್ಡ್ ವಿತರಣೆ ಆಗಿಲ್ಲ. ವ್ಯಾಪಾರ ನಡೆಸಲು ನಿಗದಿತ ಸ್ಥಳಗಳನ್ನೂ ಗುರುತಿಸಿಲ್ಲ.
ಜಿಬಿಎ ಅಧಿಕಾರಿಗಳು ಈ ಹಿಂದೆ, “ಐಡಿ ಕಾರ್ಡ್ ನೀಡಿದ ಬಳಿಕ ವ್ಯಾಪಾರಿಗಳಿಗೆ ನಿಗದಿತ ಸ್ಥಳಗಳನ್ನು ಗುರುತಿಸಲಾಗುವುದು. ಅವರು ಅದೇ ಸ್ಥಳದಲ್ಲಿ ವ್ಯಾಪಾರ ನಡೆಸಬೇಕು” ಎಂದು ಹೇಳಿದ್ದರು. ಆದರೆ ಸ್ಥಳ ಗುರುತಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡಲು ಜಿಬಿಎ ಹಾಗೂ ಸಂಚಾರ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆದರೆ ಇದುವರೆಗೆ ನಗರದ ಹಲವು ಪ್ರದೇಶಗಳಲ್ಲಿ ಆ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎನ್ನಲಾಗುತ್ತಿದೆ.
ಕಳೆದ ಮಾರ್ಚ್‌ನಲ್ಲಿ ನಗರದಲ್ಲಿ ಸುಮಾರು 25.400 ಸಾವಿರ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ ಎಂದು ನಗರಪಾಲಿಕೆ ಆಯುಕ್ತರು ತಿಳಿಸಿದ್ದರು. ಅವರಿಗೆ ಐಡಿ ಕಾರ್ಡ್ ನೀಡಲು ಮುದ್ರಣ ಕಾರ್ಯವೂ ನಡೆದಿತ್ತು. ಆದರೆ ಬಳಿಕ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ಬದಲಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಮುದ್ರಿಸಲಾಗಿದ್ದ ಕಾರ್ಡ್‌ಗಳನ್ನು ರದ್ದುಪಡಿಸಿ ಹೊಸ ಮಾದರಿಯ ಡಿಜಿಟಲ್ ಐಡಿ ಕಾರ್ಡ್ ಮುದ್ರಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊಸದಾಗಿ ನೀಡಲಾಗುವ ಡಿಜಿಟಲ್ ಐಡಿ ಕಾರ್ಡ್‌ನಲ್ಲಿ ವ್ಯಾಪಾರಿಯ ಹೆಸರು, ವ್ಯಾಪಾರದ ಸ್ಥಳ, ವೃತ್ತಿ, ಬೀದಿ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳು ಇರಲಿವೆ. ಸುಮಾರು 25.400 ಸಾವಿರ ವ್ಯಾಪಾರಿಗಳಿಗೆ ಕಾರ್ಡ್ ವಿತರಿಸಲು 50 ಲಕ್ಷ ಅನುದಾನವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೀಸಲಿಟ್ಟಿದೆ ಎನ್ನಲಾಗಿದೆ. ಕಾರ್ಡ್‌ನಲ್ಲಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವರಿ ಮಂತ್ರಿಗಳ ಭಾವಚಿತ್ರವೂ ಇರಲಿದೆ.
ಆದರೆ ಐಡಿ ಕಾರ್ಡ್ ವಿತರಣೆಗೂ ಮುನ್ನವೇ ವ್ಯಾಪಾರ ಸ್ಥಳಗಳನ್ನು ಗುರುತಿಸುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಗದಿತ ಸ್ಥಳವಿಲ್ಲದೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದರೆ ಸಾವಿರಾರು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸರ್ಕಾರ ಶೀಘ್ರವೇ ಸ್ಥಳ ಗುರುತು, ಐಡಿ ಕಾರ್ಡ್ ವಿತರಣೆ ಹಾಗೂ ಕಾನೂನುಬದ್ಧ ವ್ಯಾಪಾರ ವ್ಯವಸ್ಥೆ ಜಾರಿಗೆ ತರಬೇಕೆಂಬ ಒತ್ತಾಯ ವ್ಯಾಪಾರಿಗಳಿಂದ ಕೇಳಿಬರುತ್ತಿದೆ.
ನಗರದಲ್ಲಿ ಗುರುತಿಸಲ್ಪಡುವ ಬೀರಿ ಬದಿ ವ್ಯಾಪಾರಿಗಳು.
ಬೆಂಗಳೂರು ಉತ್ತರ ನಗರಪಾಲಿಕೆ – 4574
ಬೆಂಗಳೂರು ದಕ್ಷಿಣ ನಗರಪಾಲಿಕೆ -3901
ಬೆಂಗಳೂರು ಪಶ್ಚಿಮ ನಗರಪಾಲಿಕೆ -9392
ಬೆಂಗಳೂರು ಪೂರ್ವ ನಗರಪಾಲಿಕೆ -1924.
ಬೆಂಗಳೂರು ಕೇಂದ್ರ ನಗರಪಾಲಿಕೆ -5612
ಇದನ್ನೂ ಓದಿ ; ಪೊಲೀಸರ ಕಣ್ತಪ್ಪಿಸಿ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!



















