ಬೆಂಗಳೂರು: ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ವಹಿವಾಟುಗಳ ಮೇಲೆ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಅನ್ನು ಪರಿಚಯಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೊಂದು ವೇಳೆ, ಎಂಡಿಆರ್ ಶುಲ್ಕ ಜಾರಿಗೆ ಬಂದರೆ ದೇಶದ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಯುಪಿಐ ಪಾವತಿಗೂ ಶುಲ್ಕ ಪಾವತಿಸಬೇಕಾಗುತ್ತದೆ.
ವರದಿಯ ಪ್ರಕಾರ, ವಾರ್ಷಿಕ 1 ಕೋಟಿ ರೂಪಾಯಿಯಿಂದ 1.5 ಕೋಟಿ ರೂಪಾಯಿವರೆಗೆ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಈ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಯುತ್ತಿದೆ. ವಿಶೇಷವಾಗಿ, 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಮಾತ್ರ ಈ MDR ಶುಲ್ಕ ಅನ್ವಯವಾಗುವ ಸಾಧ್ಯತೆಯಿದೆ. ಆದರೆ, ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ.
ಏನಿದು ಎಂಡಿಆರ್?
ಗ್ರಾಹಕರು ಡಿಜಿಟಲ್ ಪಾವತಿ ಮಾಡಿದಾಗಲೆಲ್ಲಾ ವ್ಯಾಪಾರಿಗಳು, ಬ್ಯಾಂಕ್ ಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ಪಾವತಿಸುವ ಶುಲ್ಕವೇ ಮರ್ಚೆಂಟ್ ಡಿಸ್ಕೌಂಟ್ ರೇಟ್. 2020ರ ಜನವರಿಯಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು UPI ಮೇಲಿನ ಎಂಡಿಆರ್ ಶುಲ್ಕವನ್ನು ತೆಗೆದುಹಾಕಿತ್ತು. ಒಂದು ವೇಳೆ ಈಗ ಈ ನಿರ್ಧಾರ ಜಾರಿಯಾದರೆ, ಅದು ಸರ್ಕಾರದ ನೀತಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ.
ಇದನ್ನು ಏಕೆ ಮತ್ತೆ ಪರಿಗಣಿಸಲಾಗುತ್ತಿದೆ?
ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವುದು, ಪಾವತಿ ಮೂಲಸೌಕರ್ಯವನ್ನು ನಿರ್ವಹಿಸುವುದು ಮತ್ತು ಹಣವನ್ನು ಸೆಟಲ್ ಮಾಡುವುದು ಸೇರಿ ಮುಂತಾದ ಕಾರ್ಯಾಚರಣೆಗಳಿಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಈ ಶುಲ್ಕವನ್ನು ಬಳಸಲಾಗುತ್ತದೆ. ಡಿಜಿಟಲ್ ಪಾವತಿ ವ್ಯವಸ್ಥೆಯ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಈ ಕ್ರಮದ ಅವಶ್ಯಕತೆ ಇದೆ ಎಂದು ಸರ್ಕಾರ ಪರಿಗಣಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ : ಆನ್‌ಲೈನ್ ಬ್ಯಾಂಕಿಂಗ್ ವೇಳೆ ಭಾರಿ ವಂಚನೆ : ದುಡ್ಡು ಕಳೆದುಕೊಳ್ಳದಿರಲು ಹೀಗೆ ಮಾಡಿ!



















