ಮುಂಬೈ : ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕರಾಗಿದ್ದ ಅಜಿತ್ ಪವಾರ್ ಅವರು ಜನವರಿ 28ರಂದು ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರ ಸಾವಿನ ತಿಂಗಳುಗಳ ಬಳಿಕ ಎನ್‌ಸಿಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಅಮೋಲ್ ಮಿಟ್ಕರಿ ಅವರು ಆಘಾತಕಾರಿ ಆರೋಪವೊಂದನ್ನು ಮಾಡಿದ್ದು, ಅಜಿತ್ ಪವಾರ್ ಅವರ ಸಾವಿಗೂ ಮುನ್ನ ಬಾರಾಮತಿಯಲ್ಲಿ ‘ವಾಮಾಚಾರ’ (Black magic) ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಅಘೋರಿ ಪೂಜೆಯ ಶಂಕೆ
ಅಜಿತ್ ಪವಾರ್ ಅವರು ಭೇಟಿ ನೀಡಬೇಕಿದ್ದ ವಿದ್ಯಾ ಪ್ರತಿಷ್ಠಾನದ ಎಐ ಕಟ್ಟಡದ ನಿರ್ಮಾಣ ಸ್ಥಳದ ಬಳಿ, ಅವರು ಭೇಟಿ ನೀಡುವ ಹಿಂದಿನ ದಿನ ಮಧ್ಯರಾತ್ರಿ ‘ಅಘೋರಿ ಪೂಜೆ’ ಮಾಡಲಾಗಿತ್ತು ಎಂದು ಮಿಟ್ಕರಿ ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಸ್ಥಳೀಯರನ್ನು ಉಲ್ಲೇಖಿಸಿರುವ ಅವರು, ವಿಮಾನ ದುರಂತಕ್ಕೂ ಮುನ್ನ ಖಟ್ಲಾಪಟ್ಟ ಕಾಟೆವಾಡಿ ಪ್ರದೇಶದಲ್ಲಿರುವ ಪವಾರ್ ಅವರ ಬಂಗಲೆಯ ಮುಂದೆ ಮೇಕೆಯೊಂದನ್ನು ತಲೆಕೆಳಗಾಗಿ ನೇತುಹಾಕಿ ಭೀಕರ ಆಚರಣೆಗಳನ್ನು ಮಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೂಢನಂಬಿಕೆಯನ್ನು ಸದಾ ವಿರೋಧಿಸುತ್ತಿದ್ದ ನಾಯಕನ ವಿರುದ್ಧ ಇಂಥ ಭೀಕರ ಕೃತ್ಯ ಎಸಗಿದ್ದು ಯಾರು ಎಂಬ ಭಯಾನಕ ಸತ್ಯ ಜನರೆದುರು ಬರಬೇಕಿದೆ ಎಂದು ಅವರು ತನಿಖಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪತಿಯ ಸಾವಿನ ಬಗ್ಗೆ ಸುನೇತ್ರಾ ಪವಾರ್ ಅನುಮಾನ
ಅಜಿತ್ ಪವಾರ್ ಹಾಗೂ ಇತರ ನಾಲ್ವರನ್ನು ಬಲಿಪಡೆದ ಈ ವಿಮಾನ ದುರಂತದ ತನಿಖೆ ಇನ್ನೂ ನಡೆಯುತ್ತಿದ್ದು, ಸಿಬಿಐ ತನಿಖೆಗೂ ಆಗ್ರಹಿಸಲಾಗಿದೆ. ಈ ನಡುವೆ ಬಾರಾಮತಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್, ತಮ್ಮ ಪತಿಯ ಸಾವಿನ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಹಿಂದಿನ ಸತ್ಯ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ, ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಾರಾಮತಿ ಉಪಚುನಾವಣೆಯಲ್ಲಿ ಸುನೇತ್ರಾ ಸ್ಪರ್ಧೆ
ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರು ಕಣಕ್ಕಿಳಿದಿದ್ದಾರೆ. ಅಗಲಿದ ಹಿರಿಯ ನಾಯಕನ ಮೇಲಿನ ಗೌರವದ ಸಂಕೇತವಾಗಿ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಕಣದಿಂದ ಹಿಂಪಡೆದಿವೆ. ಹೀಗಾಗಿ ಬಾರಾಮತಿ ಉಪಚುನಾವಣೆಯು ಬಹುತೇಕ ಏಕಪಕ್ಷೀಯ ಸ್ಪರ್ಧೆಯಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ : ಚಾಲಕನಿಗೆ ನಿದ್ದೆ ಮಂಪರು.. ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದ ಕಾರು!


















