ಡೆಹ್ರಾಡೂನ್ : ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡವು ಮತ್ತೊಂದು ಜೀವವನ್ನು ಬಲಿಪಡೆದಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ 23 ವರ್ಷದ ಯುವತಿಯೊಬ್ಬಳು ತನ್ನ ನಿವಾಸದಲ್ಲಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯುವತಿಯನ್ನು 1999ರ ಕಾರ್ಗಿಲ್ ಯುದ್ಧದ ವೀರ ಯೋಧರೊಬ್ಬರ ಪುತ್ರಿ ರಿಯಾ ಕುಮಾರಿ ಥಾಪಾ ಎಂದು ಗುರುತಿಸಲಾಗಿದೆ. ಹನ್ನೆರಡನೇ ತರಗತಿಯಲ್ಲಿ ಶೇಕಡಾ 97 ರಷ್ಟು ಅಂಕ ಗಳಿಸಿ ಶಾಲೆಗೆ ಟಾಪರ್ ಆಗಿದ್ದ ಪ್ರತಿಭಾವಂತ ವಿದ್ಯಾರ್ಥಿನಿ, ಪರೀಕ್ಷೆಯ ವೈಫಲ್ಯದ ಜಿಗುಪ್ಸೆಯಿಂದಾಗಿ ಈ ಆಘಾತಕಾರಿ ನಿರ್ಧಾರ ಕೈಗೊಂಡಿರುವುದು ಇಡೀ ಊರಿಗೆ ಆಘಾತ ಮೂಡಿಸಿದೆ.
ಮಂಗಳವಾರ ಮಧ್ಯಾಹ್ನ ರಿಯಾ ಅವರ ತಾಯಿ ಊಟದ ಸಮಯವಾದ್ದರಿಂದ ಮಗಳನ್ನು ಕರೆಯಲು ಆಕೆಯ ಕೋಣೆಯ ಬಳಿ ಹೋಗಿದ್ದರು. ಆದರೆ ಎಷ್ಟು ಬಾರಿ ಕೂಗಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲನ್ನು ಕೂಡ ತೆರೆಯಲಿಲ್ಲ. ಇದರಿಂದ ಗಾಬರಿಗೊಂಡ ತಾಯಿ ತಕ್ಷಣವೇ ಪತಿಯನ್ನು ಕರೆದಿದ್ದಾರೆ. ಕುಟುಂಬಸ್ಥರು, ಸ್ಥಳೀಯರು ಸೇರಿ ಒಟ್ಟಾಗಿ ಬಾಗಿಲನ್ನು ಬಲವಂತವಾಗಿ ಮುರಿದು ಒಳಪ್ರವೇಶಿಸಿದಾಗ, ರಿಯಾ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಡೆತ್‌ನೋಟ್‌ನಲ್ಲಿ ಹೆತ್ತವರಿಗೆ ಐ ಲವ್ ಯೂ ಸಂದೇಶ
ಸ್ಥಳಕ್ಕೆ ಧಾವಿಸಿದ ಪೊಲೀಸರು ರಿಯಾ ಕೋಣೆಯನ್ನು ಪರಿಶೀಲಿಸಿದಾಗ ಹಿಂದಿಯಲ್ಲಿ ಬರೆಯಲಾದ ಆತ್ಮಹತ್ಯೆ ಪತ್ರ (ಡೆತ್‌ನೋಟ್) ಪತ್ತೆಯಾಗಿದೆ. ಆ ಪತ್ರದಲ್ಲಿ ರಿಯಾ, “ಐ ಲವ್ ಯೂ ಮಮ್ಮಿ, ಪಾಪಾ. ನನ್ನ ಈ ನಿರ್ಧಾರಕ್ಕೆ ಯಾರೂ ಜವಾಬ್ದಾರರಲ್ಲ, ಯಾರದ್ದೂ ತಪ್ಪಿಲ್ಲ” ಎಂದು ಬರೆದಿದ್ದಾಳೆ. ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಕಂಡಾರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ರಿಯಾ ಸಾಮಾನ್ಯವಾಗಿ ರಾತ್ರಿಯಿಡೀ ಓದುತ್ತಿದ್ದಳು ಮತ್ತು ಮುಂಜಾನೆ ತಡವಾಗಿ ಏಳುತ್ತಿದ್ದಳು. ಆದರೆ ಆಕೆಯ ಡೆತ್‌ನೋಟ್‌ನಲ್ಲಿ ತಂದೆ-ತಾಯಿಯ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದರ ಜೊತೆಗೆ, ತನ್ನ ಓದಿನಲ್ಲಿ ಯಶಸ್ಸು ಸಿಗದೇ ಇರುವುದಕ್ಕೆ ತನ್ನದೇ ಆದ ಅಸಮರ್ಥತೆ ಕಾರಣ ಎಂದು ಬರೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ನೀಟ್ ಮರುಪರೀಕ್ಷೆಯ ತೀವ್ರ ಒತ್ತಡದಲ್ಲಿದ್ದ ರಿಯಾ
ಪೊಲೀಸ್ ತನಿಖೆಯ ಪ್ರಕಾರ, ರಿಯಾ ಕುಮಾರಿ ಥಾಪಾ ಹನ್ನೆರಡನೇ ತರಗತಿಯಲ್ಲಿ ಶೇಕಡಾ 97 ರಷ್ಟು ಅಂಕಗಳನ್ನು ಗಳಿಸಿ, ಶಾಲೆಗೆ ಮೊದಲ ಸ್ಥಾನ ಪಡೆದಿದ್ದಳು. ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಹಂಬಲ ಆಕೆಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮೊದಲ ನೀಟ್ (NEET-UG) ಪರೀಕ್ಷೆ ರದ್ದಾದ ಬಳಿಕ, ತೀವ್ರ ಒತ್ತಡಕ್ಕೆ ಸಿಲುಕಿದ್ದ ಆಕೆ ಜೂನ್ 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಗೆ ತೀವ್ರ ತಯಾರಿ ನಡೆಸುತ್ತಿದ್ದಳು. ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ನೀಟ್ ಪರೀಕ್ಷೆ ಕಾರಣಕ್ಕೆ ಆ್ಯಪ್ ನಿಷೇಧ : ಕೇಂದ್ರದ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್!



















