ವಾಷಿಂಗ್ಟನ್ : ಜಾಗತಿಕ ಭೌಗೋಳಿಕ ರಾಜಕೀಯದಲ್ಲಿ ಅತ್ಯಂತ ನಿರ್ಣಾಯಕ ಎನಿಸಿಕೊಂಡಿದ್ದ ‘ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್’ (USINDOPACOM) ಹೆಸರನ್ನು ಅಮೆರಿಕ ಸರ್ಕಾರವು ಅಧಿಕೃತವಾಗಿ ಹಳೆಯ ಹೆಸರಾದ ‘ಯುಎಸ್ ಪೆಸಿಫಿಕ್ ಕಮಾಂಡ್’ (USPACOM) ಎಂದು ಮರುನಾಮಕರಣ ಮಾಡಿದೆ. ಎಂಟು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ಹಿಂಪಡೆದಿರುವ ಅಮೆರಿಕದ ಈ ನಡೆ ಈಗ ಭಾರತೀಯ ರಾಜತಾಂತ್ರಿಕ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ಬದಲಾವಣೆಯು ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಒಳಗೊಂಡಿರುವ ‘ಕ್ವಾಡ್’ (Quad) ಒಕ್ಕೂಟದ ಪ್ರಭಾವವನ್ನು ಕುಗ್ಗಿಸಲಿದೆಯೇ ಎಂಬ ಚರ್ಚೆಗಳು ಆರಂಭವಾಗಿವೆ.
ಕ್ವಾಡ್ ಶವಪೆಟ್ಟಿಗೆಗೆ ಹೊಡೆದ ಮತ್ತೊಂದು ಮೊಳೆ ಎಂದ ತರೂರ್
ಅಮೆರಿಕದ ಯುದ್ಧ ಇಲಾಖೆ ಹೊರಡಿಸಿರುವ ಈ ಆದೇಶದ ಪ್ರತಿಯನ್ನು ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕಮಾಂಡ್ ಹೆಸರಿನಿಂದ ‘ಇಂಡೋ’ (ಭಾರತಕ್ಕೆ ಸಂಬಂಧಿಸಿದ) ಎಂಬ ಪದವನ್ನು ಕೈಬಿಟ್ಟಿರುವುದನ್ನು ಕಟುವಾಗಿ ಟೀಕಿಸಿರುವ ಅವರು, “ಇದು ಕ್ವಾಡ್ ಒಕ್ಕೂಟದ ಶವಪೆಟ್ಟಿಗೆಗೆ ಹೊಡೆದ ಮತ್ತೊಂದು ಮೊಳೆಯೇ?” ಎಂದು ಪ್ರಶ್ನಿಸುವ ಮೂಲಕ ಭಾರತದ ಭದ್ರತಾ ಹಿತಾಸಕ್ತಿಗಳ ಮೇಲಾಗುವ ಪರಿಣಾಮದತ್ತ ಬೆರಳು ಮಾಡಿದ್ದಾರೆ. ವಾಷಿಂಗ್ಟನ್‌ನ ಈ ಹೊಸ ರಾಜತಾಂತ್ರಿಕ ಸಂದೇಶವು ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಪ್ರಾಮುಖ್ಯತೆಯನ್ನು ಕಡಿಮೆ ಅಂದಾಜು ಮಾಡುವಂತಿದೆ ಎಂಬುದು ಹಲವು ಭದ್ರತಾ ತಜ್ಞರ ಅಭಿಪ್ರಾಯವಾಗಿದೆ.
ಅಮೆರಿಕದ ಸಮರ್ಥನೆ
ಭಾರತದಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಆತಂಕಗಳ ನಡುವೆಯೂ, ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಇದು ಕೇವಲ ತಾಂತ್ರಿಕ ಹೆಸರಿನ ಬದಲಾವಣೆಯಷ್ಟೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬದಲಾವಣೆಯಿಂದ ಕಮಾಂಡ್‌ನ ಕಾರ್ಯಾಚರಣೆ, ಜವಾಬ್ದಾರಿಗಳು ಅಥವಾ ಈ ವಲಯಕ್ಕೆ ನೀಡಿರುವ ಭದ್ರತಾ ಬದ್ಧತೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. 1947ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರು ಸ್ಥಾಪಿಸಿದ್ದ ಈ ಕಮಾಂಡ್‌ನ ಆಳವಾದ ಐತಿಹಾಸಿಕ ಬೇರುಗಳು ಮತ್ತು ಮಿಲಿಟರಿ ಪರಂಪರೆಯನ್ನು ಗೌರವಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೆಂಟಗನ್ ಹೇಳಿದೆ. ಎರಡನೇ ಮಹಾಯುದ್ಧದ ನಂತರದ ಪ್ರಾದೇಶಿಕ ಭದ್ರತೆ, ಕೊರಿಯಾ ಯುದ್ಧ ಮತ್ತು ವಿಯೆಟ್ನಾಂ ಯುದ್ಧಗಳಲ್ಲಿ ಈ ಪೆಸಿಫಿಕ್ ಕಮಾಂಡ್ ಮಹತ್ತರ ಪಾತ್ರ ವಹಿಸಿತ್ತು.
2018ರಲ್ಲಿ ಹೆಸರಿಸಿದ್ದ ಡೊನಾಲ್ಡ್ ಟ್ರಂಪ್ ಸರ್ಕಾರ
ಹವಾಯಿಯನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿರುವ ಈ ಕಮಾಂಡ್ ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರದ ಬಹುಪಾಲು ಭಾಗ, ಪೂರ್ವ ಏಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ಭಾಗಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ. ಈ ಹಿಂದೆ 2018 ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ, ಅಂದಿನ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಪೆಸಿಫಿಕ್ ಕಮಾಂಡ್‌ಗೆ ‘ಇಂಡೋ’ ಎಂಬ ಪದವನ್ನು ಸೇರಿಸಿದ್ದರು. ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವಿನ ಭದ್ರತಾ ಒಕ್ಕೂಟದ ಬೆಳವಣಿಗೆ ಹಾಗೂ ಬಾಲಿವುಡ್‌ನಿಂದ ಹಾಲಿವುಡ್‌ವರೆಗಿನ ಭೌಗೋಳಿಕ ವ್ಯಾಪ್ತಿಯನ್ನು ಗುರುತಿಸಿ ಅಂದು ಈ ಮಹತ್ವದ ಬದಲಾವಣೆ ಮಾಡಲಾಗಿತ್ತು.
ಭಾರತದ ರಕ್ಷಣಾ ಸಹಕಾರಕ್ಕೆ ಹಿನ್ನಡೆಯಾಗಲಿದೆಯೇ?
ಕಳೆದ ಕೆಲವು ವರ್ಷಗಳಲ್ಲಿ ಈ ಇಂಡೋ-ಪೆಸಿಫಿಕ್ ಕಮಾಂಡ್ ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಂಬಂಧಗಳನ್ನು ವೃದ್ಧಿಸುವಲ್ಲಿ ಅತ್ಯಂತ ಪ್ರಮುಖ ಸಾಂಸ್ಥಿಕ ಮಾಧ್ಯಮವಾಗಿ ಬೆಳೆದುಬಂದಿತ್ತು. ಜಂಟಿ ಮಿಲಿಟರಿ ಸಮರಾಭ್ಯಾಸಗಳು, ಕಡಲ ಗಸ್ತು ಸಮನ್ವಯ, ಮಾಹಿತಿ ವಿನಿಮಯ ಮತ್ತು ವಿಶಾಲವಾದ ಕಾರ್ಯತಂತ್ರದ ಸಹಕಾರಕ್ಕೆ ಇದು ಪ್ರಮುಖ ವೇದಿಕೆಯಾಗಿತ್ತು. ಈಗ ಅಮೆರಿಕ ಮತ್ತೆ ಹಳೆಯ ಹೆಸರಿಗೆ ಮರಳಿರುವುದು ಕೇವಲ ಹೆಸರಿನ ಬದಲಾವಣೆಯೋ ಅಥವಾ ಒಟ್ಟಾರೆ ಇಂಡೋ-ಪೆಸಿಫಿಕ್ ಕಾರ್ಯತಂತ್ರದಿಂದ ಅಮೆರಿಕ ಹಿಂದೆ ಸರಿಯುತ್ತಿರುವ ಮುನ್ಸೂಚನೆಯೋ ಎಂಬುದನ್ನು ಮುಂದಿನ ದಿನಗಳಷ್ಟೇ ನಿರ್ಧರಿಸಬೇಕಿದೆ.
ಇದನ್ನೂ ಓದಿ ; “50 ಕೋಟಿ ರೂ. ಆಫರ್, ಖಾಸಗಿ ಜೆಟ್‌ಗಳು” : ಹೋಳಾಗುವ ಭೀತಿಯಲ್ಲಿ ಉದ್ಧವ್ ಶಿವಸೇನೆ!



















