ಕೋಲ್ಕತ್ತಾ : ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದೊಂದಿಗೆ ನಿಕಟ ನಂಟು ಹೊಂದಿರುವ ಪಶ್ಚಿಮ ಬಂಗಾಳದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಕೋಲ್ಕತ್ತಾದ ಸುರೇಂದ್ರನಾಥ ಕಾಲೇಜು ಈಗ ದೊಡ್ಡ ಮಟ್ಟದ ವಿವಾದದ ಸುಳಿಗೆ ಸಿಲುಕಿದೆ. ಕಾಲೇಜಿನ ವಿದ್ಯಾರ್ಥಿ ಸಂಘದ (ಸ್ಟೂಡೆಂಟ್ಸ್ ಯೂನಿಯನ್) ಕೊಠಡಿಯಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಗೆದ್ದಲು ಹಿಡಿದ ನೋಟುಗಳ ಕಂತೆಗಳು, ಮಾರಕಾಸ್ತ್ರಗಳು ಹಾಗೂ ಮಾದಕ ವಸ್ತುಗಳು ಪತ್ತೆಯಾಗಿವೆ. ಇದು ಇಡೀ ಶಿಕ್ಷಣ ಕ್ಷೇತ್ರವನ್ನೇ ತಲೆತಗ್ಗಿಸುವಂತೆ ಮಾಡಿದೆ. ಬಂಗಾಳದ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಜಕೀಯದ ಹೆಸರಿನಲ್ಲಿ ನಡೆಯುತ್ತಿದ್ದ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳ ಕರಾಳ ಮುಖವನ್ನು ಈ ಘಟನೆ ಬಯಲಿಗೆಳೆದಿದೆ.
ಗೆದ್ದಲು ಹಿಡಿದ ನೋಟುಗಳು, ಐಷಾರಾಮಿ ರಹಸ್ಯ ಕೋಣೆಗಳು
ಕಾಲೇಜು ಆವರಣದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದಾಗ ಈ ಆಘಾತಕಾರಿ ಸತ್ಯಗಳು ಬೆಳಕಿಗೆ ಬಂದಿವೆ. ವಿದ್ಯಾರ್ಥಿ ಸಂಘದ ಕೊಠಡಿಯಲ್ಲಿದ್ದ ಹಳೆಯ ಮರದ ಕಪಾಟನ್ನು ತೆರೆದಾಗ ಎರಡು ದೊಡ್ಡ ಪೆಟ್ಟಿಗೆಗಳಲ್ಲಿ 100 ಮತ್ತು 500 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ದೀರ್ಘಕಾಲದಿಂದ ಇದನ್ನು ಮುಚ್ಚಿಟ್ಟಿದ್ದರಿಂದ ಹಣದ ಬಹುಪಾಲು ಭಾಗ ಗೆದ್ದಲು ಹಿಡಿದು ನಾಶವಾಗಿದೆ. ಇದನ್ನು ನೋಡಿ ಬೆಚ್ಚಿಬೀಳುವ ಹೊತ್ತಿನಲ್ಲೇ, ಕಾಲೇಜಿನ ಒಳಗಡೆ ಹವಾನಿಯಂತ್ರಿತ ವ್ಯವಸ್ಥೆ, ಐಷಾರಾಮಿ ಹಾಸಿಗೆಗಳು ಮತ್ತು ಪ್ರತ್ಯೇಕ ಶೌಚಾಲಯ ಹೊಂದಿರುವ ಎರಡು ರಹಸ್ಯ ಮಲಗುವ ಕೋಣೆಗಳು ಕೂಡ ಪತ್ತೆಯಾಗಿವೆ. ಜೊತೆಗೆ ಕಾಲೇಜಿನ ಟೆರೇಸ್ ಮೇಲೆ ಮದ್ಯದ ಬಾಟಲಿಗಳು, ಕಾಂಡೋಮ್ ಪ್ಯಾಕೆಟ್‌ಗಳು, ಕಪ್ಪು ಕವರೊಂದರಲ್ಲಿ ಬಚ್ಚಿಟ್ಟಿದ್ದ ಪಿಸ್ತೂಲ್ ಕೂಡ ಸಿಕ್ಕಿದ್ದು, ಇವೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಿಎಂಸಿ ನಾಯಕರ ಅಡ್ಡೆಯಾಗಿತ್ತೇ ವಿದ್ಯಾರ್ಥಿ ಸಂಘದ ರೂಂ?
ಕಳೆದ ವರ್ಷ ಸೌತ್ ಕಲ್ಕತ್ತಾ ಲಾ ಕಾಲೇಜಿನ ಯೂನಿಯನ್ ರೂಮ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಬಳಿಕ, ಹೈಕೋರ್ಟ್ ಆದೇಶದನ್ವಯ ವಿದ್ಯಾರ್ಥಿ ಸಂಘದ ಕೊಠಡಿಗಳನ್ನು ಮುಚ್ಚಲಾಗಿತ್ತು. ಇತ್ತೀಚೆಗೆ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ವಿದ್ಯಾರ್ಥಿ ಸಂಘಗಳ ನಿಧಿಯ ಆಡಿಟ್ ನಡೆಸಲು ಆದೇಶಿಸಿದ ಹಿನ್ನೆಲೆಯಲ್ಲಿ ಈ ಕೊಠಡಿಯನ್ನು ತೆರೆಯಲಾಗಿತ್ತು. ಈ ರಹಸ್ಯ ಕೋಣೆಗಳನ್ನು ಹಿಂದಿನ ತೃಣಮೂಲ ಕಾಂಗ್ರೆಸ್ (TMC) ಆಡಳಿತಾವಧಿಯಲ್ಲಿ ‘ಟೆರೇಸ್ ಸೌಲಭ್ಯ’ದ ಹೆಸರಿನಲ್ಲಿ ಉದ್ಘಾಟಿಸಲಾಗಿತ್ತು ಎಂದು ತಿಳಿದುಬಂದಿದೆ. ಟಿಎಂಸಿ ಪ್ರಭಾವಿ ನಾಯಕ ದೇವಶಿಶ್ ಬಂಡೋಪಾಧ್ಯಾಯ (ಕಂಕಟಾ ದೇಬು) ಮತ್ತು ಅವರ ಪುತ್ರ ಶಿಬಾಶಿಶ್ ಈ ಕೋಣೆಗಳನ್ನು ತಮ್ಮ ವೈಯಕ್ತಿಕ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು ಹಾಗೂ ಕಾಲೇಜು ಸಿಬ್ಬಂದಿಯನ್ನು ತಮಗೆ ಮಸಾಜ್ ಮಾಡಲು ಬಳಸಿಕೊಳ್ಳುತ್ತಿದ್ದರು ಎಂದು ಕಾಲೇಜು ಮೂಲಗಳು ಗಂಭೀರ ಆರೋಪ ಮಾಡಿವೆ.
ತೀವ್ರಗೊಂಡ ರಾಜಕೀಯ ಸಂಘರ್ಷ
ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ ಸಜಲ್ ಘೋಷ್, ಕಾಲೇಜು ಪ್ರವೇಶಾತಿಯಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ದಂಧೆಯ ಹಣ ಇದಾಗಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯದಿಂದ (ED) ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ತೃಣಮೂಲ ಛಾತ್ರ ಪರಿಷತ್ (TMCP) ನಾಯಕರು ಮೆರಿಟ್ ವಿದ್ಯಾರ್ಥಿಗಳನ್ನು ವಂಚಿಸಿ, ಸೀಟುಗಳಿಗಾಗಿ 20ರಿಂದ 50,000 ರೂ.ವರೆಗೆ ವಸೂಲಿ ಮಾಡುತ್ತಿದ್ದರು ಮತ್ತು ಈ ಹಣದ ಒಂದು ಭಾಗ ಕಾಲಿಘಾಟ್‌ಗೆ (ಮಮತಾ ಬ್ಯಾನರ್ಜಿ ನಿವಾಸ) ತಲುಪುತ್ತಿತ್ತು ಎಂದು ಅವರು ದೂರಿದ್ದಾರೆ. ಬಂಗಾಳದ ಹಲವು ವಿಶ್ವವಿದ್ಯಾಲಯಗಳಲ್ಲಿ ಇಂತಹದ್ದೇ ಪರಿಸ್ಥಿತಿ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಲೇಜುಗಳ ಕರಾಳ ರಹಸ್ಯಗಳು ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಬಾಬರ್ ಕಡೆಗಣಿಸಿ ಕೊಹ್ಲಿಯೇ ನನ್ನ ಸ್ಫೂರ್ತಿ ಎಂದ ಪಾಕ್ ಯುವ ಕ್ರಿಕೆಟಿಗ!



















