ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಿ, 294 ಕ್ಷೇತ್ರಗಳ ಪೈಕಿ 206 ಸ್ಥಾನಗಳನ್ನು ಗೆದ್ದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಜಯದ ಅಲೆಯ ನಡುವೆ ಇಡೀ ದೇಶದ ಗಮನ ಸೆಳೆದಿರುವುದು ಔಸ್‌ಗ್ರಾಮ್ ಕ್ಷೇತ್ರದ ನೂತನ ಶಾಸಕಿ ಕಲಿತ್ ಮಜಿ ಅವರ ಸಾಧನೆ. ತಿಂಗಳಿಗೆ ಕೇವಲ 2,500 ರೂಪಾಯಿ ಸಂಬಳಕ್ಕೆ ನಾಲ್ಕು ಮನೆಗಳಲ್ಲಿ ಪಾತ್ರೆ ತೊಳೆದು ಜೀವನ ಸಾಗಿಸುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರು ಇಂದು ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.
ಸಾಮಾನ್ಯ ಕಾರ್ಯಕರ್ತೆಯ ಅಸಾಮಾನ್ಯ ಗೆಲುವು
38 ವರ್ಷದ ಕಲಿತ್ ಮಜಿ ಅವರು ಕಳೆದ ಎರಡು ದಶಕಗಳಿಂದ ಜನರ ಮನೆಗಳಲ್ಲಿ ಕೆಲಸ ಮಾಡುತ್ತಾ ಕುಟುಂಬವನ್ನು ಸಲಹುತ್ತಿದ್ದರು. ಔಸ್‌ಗ್ರಾಮ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಯಾವುದೇ ಅಬ್ಬರವಿಲ್ಲದೆ ಅತ್ಯಂತ ಸರಳವಾಗಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ್ದರು. ಚುನಾವಣಾ ಫಲಿತಾಂಶದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಮಜಿ ಅವರು, ತೃಣಮೂಲ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಶ್ಯಾಮ ಪ್ರಸನ್ನ ಲಾಹೋರಿ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿ ಬೀಗಿದ್ದಾರೆ.
ಬಡತನದ ನಡುವೆಯೂ ರಾಜಕೀಯ ಛಲ
ಕಲಿತ್ ಮಜಿ ಅವರ ಪತಿ ಸುಬ್ರತಾ ಮಜಿ ದಿನಗೂಲಿ ಕಾರ್ಮಿಕರಾಗಿದ್ದಾರೆ. ಕಳೆದ ಒಂದು ದಶಕದಿಂದ ಸಕ್ರಿಯ ರಾಜಕೀಯದಲ್ಲಿರುವ ಕಲಿತ್ ಅವರು ಬೂತ್ ಮಟ್ಟದ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿದಿದ್ದರು. 2021ರ ಚುನಾವಣೆಯಲ್ಲೂ ಸ್ಪರ್ಧಿಸಿ ಸ್ವಲ್ಪದರಲ್ಲೇ ಸೋತಿದ್ದ ಅವರಿಗೆ ಈ ಬಾರಿ ಮತದಾರರು ಕೈ ಹಿಡಿದಿದ್ದಾರೆ. ಅವರ ಆಸ್ತಿ ವಿವರಗಳ ಪ್ರಕಾರ, ಕೇವಲ 1.61 ಲಕ್ಷ ರೂ.ಗಳ ಒಟ್ಟು ಆಸ್ತಿ ಹೊಂದಿರುವ ಅವರು, ಭಾರತೀಯ ರಾಜಕಾರಣದಲ್ಲಿ ಅತ್ಯಂತ ಬಡ ಶಾಸಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ
ಕಲಿತ್ ಮಜಿ ಅವರ ಗೆಲುವು ಘೋಷಣೆಯಾಗುತ್ತಿದ್ದಂತೆಯೇ, ಅವರು ಮನೆಯೊಂದರಲ್ಲಿ ಕುಳಿತು ಪಾತ್ರೆ ತೊಳೆಯುತ್ತಿರುವ ಹಳೆಯ ಭಾವಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬಿಜೆಪಿ ಸಂಸದ ಪಿಸಿ ಮೋಹನ್ ಸೇರಿದಂತೆ ಹಲವು ಗಣ್ಯರು ಈ ಫೋಟೋವನ್ನು ಹಂಚಿಕೊಂಡಿದ್ದು, “ಒಬ್ಬ ಸಾಮಾನ್ಯ ಪ್ರಜೆಯೂ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಕಲಿತ್ ಮಜಿ ಅವರ ಪರಿಶ್ರಮಕ್ಕೆ ಸಾಕ್ಷಿ” ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ : ಟ್ಯಾಗೋರ್ ಜಯಂತಿಯಂದೇ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಉದಯ : ಮೇ 9ಕ್ಕೆ ನೂತನ ಸಿಎಂ ಪ್ರಮಾಣವಚನ!



















