ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಪ್ರಕರಣೊಂದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಒಂಟಿ ಮಹಿಳೆಯನ್ನೇ ಗುರಿಯಾಗಿಸಿಕೊಂಡ ಐವರು ಆರೋಪಿಗಳು ಅಪಘಾತದ ನಾಟಕವಾಡಿ ಕೊಲೆ ಮಾಡಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆರಂಭದಲ್ಲಿ ಇದು ಸಾಮಾನ್ಯ ರಸ್ತೆ ಅಪಘಾತ ಎಂದು ಕಾಣಿಸಿಕೊಂಡಿದ್ದರೂ, ನಂತರ ಇದರ ಹಿಂದೆ ಭೀಕರ ಸಂಚು ಅಡಗಿತ್ತು ಎಂಬುದು ಬಹಿರಂಗವಾಗಿದೆ.
ಮಹಾಲಕ್ಷ್ಮಿ ಲೇಔಟ್ ಪೊಲೀಸರು ನಡೆಸಿದ ತನಿಖೆಯಲ್ಲಿ ಐವರು ಆರೋಪಿಗಳ ಭೀಕರ ಕೃತ್ಯ ಹೊರಬಂದಿದೆ. ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಹಾಗೂ ಯೋಹಾನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಹಣ ಮತ್ತು ಚಿನ್ನಾಭರಣ ಕಳವು ಮಾಡುವ ಉದ್ದೇಶದಿಂದಲೇ ಮಹಿಳೆಯನ್ನು ಗುರಿಯಾಗಿಸಿಕೊಂಡು ಈ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 21ರಂದು ನಡೆದಿದ್ದ ಅಪಘಾತ
ಕಳೆದ ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ವಿಜಯಲಕ್ಷ್ಮಿ ಎಂಬ ಮಹಿಳೆ ರಸ್ತೆ ನಡೆದು ಹೋಗುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದರು. ಅಪಘಾತದ ನಂತರ ಬೈಕ್ ಸವಾರ ರಾಕೇಶ್ ಅಲ್ಲಿಂದ ಎಸ್ಕೇಪ್ ಆಗಿದ್ದ. ಬಳಿಕ ಆಟೋದಲ್ಲಿ ಬಂದ ಪ್ರದೀಪ್, ಯೋಹಾನ್ ಹಾಗೂ ಮಂಜುನಾಥ್ ಸೇರಿ ಗಾಯಾಳು ವಿಜಯಲಕ್ಷ್ಮಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆರಂಭದಲ್ಲಿ ಇದನ್ನು ಮಾನವೀಯತೆ ಎಂದು ಕಂಡಿದ್ದವರು ನಂತರ ಬೆಚ್ಚಿಬಿದ್ದಿದ್ದಾರೆ.
ವಿಜಯಲಕ್ಷ್ಮಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲೇ ಆರೋಪಿಗಳ ನಿಜ ಉದ್ದೇಶ ಹೊರಬಂದಿದೆ. ಮಂಜುನಾಥ್ ವಿಜಯಲಕ್ಷ್ಮಿ ಪರ್ಸ್‌ನಲ್ಲಿದ್ದ ಮನೆ ಕೀಲಿಯನ್ನು ತೆಗೆದುಕೊಂಡಿದ್ದ. ನಂತರ ನೇರವಾಗಿ ಆಕೆಯ ಮನೆಗೆ ಹೋಗಿ ಹಣ ಹಾಗೂ ಚಿನ್ನಾಭರಣ ಹುಡುಕಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಪ್ರಶ್ನಿಸಿದಾಗ “ಆಧಾರ್ ಕಾರ್ಡ್ ಬೇಕಿತ್ತು” ಎಂದು ಸುಳ್ಳು ಹೇಳಿದ್ದಾನೆ.
ಇನ್ನು, ಮಂಜುನಾಥ್ ಮಾತುಗಳಲ್ಲಿ ಗೊಂದಲ ಕಂಡ ಅಕ್ಕಪಕ್ಕದವರು ಮತ್ತಷ್ಟು ಪ್ರಶ್ನೆ ಮಾಡಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಗಾಯಗೊಂಡ ವಿಜಯಲಕ್ಷ್ಮಿಯನ್ನು ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ನಡುವೆ ರಾಕೇಶ್ ತಾನೇ ಸಂಚಾರ ಪೊಲೀಸರಿಗೆ ದೂರು ನೀಡಿ, ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ ಎನ್ನಲಾಗಿದೆ.
ಪರಿಚಯಸ್ಥ ವಿಜಯಲಕ್ಷ್ಮಿಯನ್ನು ತಾನೇ ರಕ್ಷಿಸಿದ್ದೇನೆ ಎಂದು ಹೇಳಿಕೊಂಡ ರಾಕೇಶ್, ಸಂಚಾರ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದ. ಆದರೆ ಘಟನೆ ನಡೆದ ಎರಡು ದಿನಗಳ ಬಳಿಕ ಮನೆ ಮಾಲೀಕರಿಗೆ ಕಳ್ಳತನ ಯತ್ನದ ಬಗ್ಗೆ ಅನುಮಾನ ಬಂದಿತ್ತು. ಹೀಗಾಗಿ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಮನೆ ಮಾಲೀಕರು ದೂರು ನೀಡಿದ್ದರು.
ಕಳ್ಳತನ ಯತ್ನದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ಹಾಗೂ ಇತರೆ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. ಆರೋಪಿ ಚೇತನ್ ವಿಜಯಲಕ್ಷ್ಮಿಯಿಂದ ಹಣ ಸಾಲ ಪಡೆದಿದ್ದ. ಆಕೆಯ ಬಳಿ ಇನ್ನಷ್ಟು ಹಣ ಇದೆ ಎಂದು ತಿಳಿದು ಕಳ್ಳತನಕ್ಕೆ ಸಂಚು ರೂಪಿಸಿದ್ದಾನೆ. ಇದಕ್ಕಾಗಿ ಪರಿಚಯಸ್ಥರಾದ ಮಂಜುನಾಥ್ ಹಾಗೂ ಇತರರನ್ನು ಸೇರಿಸಿಕೊಂಡು ಅಪಘಾತದ ನಾಟಕವಾಡಿ ಮಹಿಳೆಯನ್ನು ಗುರಿಯಾಗಿಸಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳ ಪ್ಲಾನ್‌ನಂತೆ ವಿಜಯಲಕ್ಷ್ಮಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಿಸದೇ ವಿಜಯಲಕ್ಷ್ಮಿ ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಎಲ್ಲಾ ಆರೋಪಿಗಳ ಕೃತ್ಯ ಬಯಲಾಗಿದ್ದು, ಇದೀಗ ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಕಸ್ಟಡಿಯಲ್ಲೇ ಆರೋಪಿ ಮಂಜುನಾಥ್ ಸಾವು
ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಮಹಿಳೆ ಮೃತಪಟ್ಟ ಎರಡೇ ದಿನಕ್ಕೆ ಆರೋಪಿ ಮಂಜುನಾಥ್ ಕೂಡ ಮೃತಪಟ್ಟಿದ್ದಾನೆ. ಅನಾರೋಗ್ಯ ಹಿನ್ನೆಲೆ ಕಸ್ಟಡಿಯಲ್ಲಿ ಇದ್ದಾಗಲೇ ಮಂಜುನಾಥ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಉಳಿದ ಆರೋಪಿಗಳ ವಿರುದ್ಧ ಕೊಲೆ ಸೇರಿದಂತೆ ಹಲವು ಆರೋಪಗಳಡಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಬಿಮ್ಸ್ ಆಸ್ಪತ್ರೆಯಲ್ಲಿ ಖೈದಿ ಸಾವು ; ವೈದ್ಯರು, ಜೈಲ್ ಸಿಬ್ಬಂದಿ ವಿರುದ್ದ ಕುಟುಂಬಸ್ಥರ ಗಂಭೀರ ಆರೋಪ!



















