ಬೀದರ್: ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಐತಿಹಾಸಿಕ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಅಭಿಮಾನಿಗಳು 51 ತೆಂಗಿನಕಾಯಿಗಳನ್ನು ಒಡೆದು ವಿಶೇಷ ಪೂಜೆ ನೆರವೇರಿಸಿದರು. ಸುಮಾರು ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನದಲ್ಲಿ ಈ ಪೂಜೆ ನಡೆಸಲಾಗಿದೆ.
ಈಶ್ವರ್ ಖಂಡ್ರೆಗೆ ಡಿಸಿಎಂ ಸ್ಥಾನ ಸಿಗಲಿ ಎಂಬ ಆಶಯದೊಂದಿಗೆ ಮೈಲಾರ ಮಲ್ಲಣ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳು, ಅವರ ಭಾವಚಿತ್ರ ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸಿ ಪೂಜೆಯಲ್ಲಿ ಭಾಗವಹಿಸಿದರು. “ಈಶ್ವರ್ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು” ಎಂಬ ಬರಹವಿರುವ ಬ್ಯಾನರ್‌ಗಳನ್ನು ಹಿಡಿದು ಅಭಿಮಾನಿಗಳು ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ರಾಜ್ಯ ರಾಜಕೀಯ ವಲಯದಲ್ಲಿ ಡಿಸಿಎಂ ಸ್ಥಾನ ಕುರಿತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಅಭಿಮಾನಿಗಳ ಈ ವಿಶೇಷ ಪೂಜೆ ಗಮನ ಸೆಳೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳು, ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ಈಶ್ವರ್ ಖಂಡ್ರೆ ಅವರ ಕೊಡುಗೆ ಅಪಾರವಾಗಿದ್ದು, ಅವರಿಗೆ ಡಿಸಿಎಂ ಸ್ಥಾನ ನೀಡುವ ಮೂಲಕ ಗೌರವಿಸಬೇಕು ಎಂದು ಆಗ್ರಹಿಸಿದರು.


















