ಮೈಸೂರು : ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ.
ಕೆಲಸ ಮುಗಿಸಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪತಿ ಮಹೇಶ್ ಪತ್ನಿ ಪುಷ್ಪ(24) ಅವರನ್ನು ಮಚ್ಚಿನಿಂದ ಕೊಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಮೃತ ಪುಷ್ಪ ಅವರು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಅವರು ಪ್ರತಿದಿನ ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದರು. ನಿನ್ನೆ ತಡರಾತ್ರಿಯೂ ಪುಷ್ಪ ಕೆಲಸ ಮುಗಿಸಿ ಮನೆಗೆ ಬಂದಾಗ ದಂಪತಿ ನಡುವೆ ಇದೇ ವಿಚಾರವಾಗಿ ತೀವ್ರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಮಹೇಶ್ ಮನೆಯಲ್ಲಿದ್ದ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ನರಸಿಂಹರಾಜ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ತಂದೆಯ ಹಣ, ಕೆಲಸಕ್ಕಾಗಿ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಮಗಳು



















