ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರ ರಾಜೀನಾಮೆ ವಿಚಾರ ಹಲವಾರು ಚರ್ಚೆಗಳನ್ನು ಹುಟ್ಟು ಹಾಕಿದೆ. ಸರ್ಕಾರ ಮತ್ತು ಧನಕರ್ ನಡುವೆ ಸುದೀರ್ಘ ಸಮಯದಿಂದ ನಾನಾ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು.
ಕೊನೆಗೆ ಕಳಂಕಿತ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಪ್ರತಿಪಕ್ಷಗಳ ನಿರ್ಣಯ ಮಂಡನೆಗೆ ಮೊದಲ ದಿನ ಒಪ್ಪಿಗೆ ನೀಡಿದ ಕ್ರಮ ರಾಜೀನಾಮೆಗೆ ದಾರಿಮಾಡಿಕೊಟ್ಟಿತು ಎಂದು ಮೂಲಗಳು ಹೇಳುತ್ತಿವೆ. ಅಲ್ಲದೇ, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಜೊತೆ ತಮ್ಮ ಫೋಟೋ ಕೂಡ ಇರಿಸಬೇಕೆಂಬ ಸಲಹೆ ನೀಡಿತ್ತಿದ್ದರು ಎನ್ನಲಾಗಿದೆ.
ತಮಗೆ ಹಾಗೂ ತಮಗೆ ನೀಡಿರುವ ಬೆಂಗಾವಲು ವಾಹನಗಳಿಗೆ ಬೆನ್ಜ್ ಕಾರು ನೀಡಬೇಕು. ಸರ್ಕಾರದ ಕಾರ್ಯಕ್ರಮಗಳು, ವಿದೇಶಿ ಗಣ್ಯರ ಆಗಮನದ ವೇಳೆ ತಮಗೆ ಸೂಕ್ತ ಗೌರವ ಸಿಗುತ್ತಿಲ್ಲ. ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಎಂಬುವುದು ಧನಕರ್ ಅವರನ್ನು ಹಲವು ಬಾರಿ ಸಿಟ್ಟಿಗೆಬ್ಬಿಸಿತ್ತು. ಪ್ರತಿಪಕ್ಷಗಳ ನೇತೃತ್ವದಲ್ಲಿ ನ್ಯಾ.ಯಶವಂತ್ ವರ್ಮಾ ಅವರ ವಾಗ್ದಂಡನೆ ಪ್ರಸ್ತಾಪ ಮುಂದಿಡುವ ಪ್ರಯತ್ನ ನಡೆಸಿದಾಗ ಸ್ವಲ್ಪ ತಾಳ್ಮೆಯಿಂದಿರುವಂತೆ ಧನಕರ್‌ರಿಗೆ ಹೇಳಲಾಗಿತ್ತು. ಆದರೆ ಧನಕರ್ ಈ ನಿರ್ಣಯಕ್ಕೆ ಮೊದಲ ದಿನವೇ ಅಂಗೀಕಾರ ನೀಡಿ ಅಚ್ಚರಿ ಮೂಡಿಸಿದ್ದರು. ಈ ಎಲ್ಲ ಕಾರಣಗಳಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ ಧನಕರ್ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ.


















