ನವದೆಹಲಿ : ಪಶ್ಚಿಮ ಏಷ್ಯಾ ಯುದ್ಧ ತೀವ್ರಗೊಂಡಿರುವಂತೆಯೇ ಕಚ್ಚಾ ತೈಲ ಆಮದು ಮೇಲಿನ ಅವಲಂಬನೆಯನ್ನು ತಗ್ಗಿಸಲು ಮತ್ತು ಪರಿಸರಸ್ನೇಹಿ ಇಂಧನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸದ್ಯ ಚಾಲ್ತಿಯಲ್ಲಿರುವ ಶೇ.20ರಷ್ಟು (E20) ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಹೊಂದಿರುವ ಇಂಧನಗಳಿಗೆ ಅಬಕಾರಿ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಈ ಆರ್ಥಿಕ ಉತ್ತೇಜನ ಕ್ರಮದಿಂದಾಗಿ ಮುಂಬರುವ ದಿನಗಳಲ್ಲಿ ವಾಹನ ಸವಾರರಿಗೆ ಇಂಧನ ದರದಲ್ಲಿ ದೊಡ್ಡ ಮಟ್ಟದ ಸಮಾಧಾನ ಸಿಗುವ ನಿರೀಕ್ಷೆಯಿದೆ.
ಶೇ.22ರಿಂದ ಶೇ.30ರವರೆಗೆ ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್ ರೂಪಾಂತರಗಳಾದ E22, E25, E27 ಮತ್ತು E30 ಇಂಧನಗಳಿಗೆ ಯಾವುದೇ ಅಬಕಾರಿ ಸುಂಕ ಅನ್ವಯಿಸುವುದಿಲ್ಲ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇತ್ತೀಚೆಗಷ್ಟೇ ಈ ಹೆಚ್ಚಿನ ಮಿಶ್ರಣದ ಇಂಧನಗಳಿಗೆ ಗುಣಮಟ್ಟದ ಮಾನದಂಡಗಳನ್ನು ಪ್ರಕಟಿಸಿದ್ದು, ಅದರ ಬೆನ್ನಲ್ಲೇ ಈ ಆರ್ಥಿಕ ಸವಲತ್ತನ್ನು ಘೋಷಿಸಲಾಗಿದೆ. ಆದರೆ, ಈ ಇಂಧನಗಳ ಸಾರ್ವಜನಿಕ ಲಭ್ಯತೆಯ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತೀವ್ರ ತಾಂತ್ರಿಕ ಪರೀಕ್ಷೆಗಳು ಮತ್ತು ಸಮಾಲೋಚನೆಗಳ ನಂತರವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಜೈವಿಕ ಇಂಧನ ಕ್ರಾಂತಿಯತ್ತ ಭಾರತದ ಹೆಜ್ಜೆ
ಭಾರತವು ತನ್ನ ಒಟ್ಟು ಇಂಧನ ಅಗತ್ಯದ ಸುಮಾರು ಶೇ.87ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದು ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಯ ಅಡಿಯಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ದೇಶವು ನಿರಂತರವಾಗಿ ಹೆಚ್ಚಿಸುತ್ತಾ ಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಶೇ.10 ರಿಂದ ಆರಂಭವಾದ ಈ ಪ್ರಯಾಣವು ಪ್ರಸ್ತುತ ಶೇ.20ರ ಗುರಿಯ ಸನಿಹಕ್ಕೆ ಬಂದು ತಲುಪಿದೆ. ಈ ಇಂಧನ ನೀತಿಯಿಂದಾಗಿ ಆಮದು ವೆಚ್ಚ ಕಡಿಮೆಯಾಗುವುದರ ಜೊತೆಗೆ, ದೇಶದ ರೈತರು, ಗ್ರಾಮೀಣ ಯುವಕರು ಮತ್ತು ಕೃಷಿ ವಲಯಕ್ಕೆ ಆರ್ಥಿಕವಾಗಿ ಭಾರಿ ಲಾಭವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ.
ಕಾರ್ಯಕ್ಷಮತೆಯ ಆತಂಕ
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಸಾಮರ್ಥ್ಯ ಮತ್ತು ಮೈಲೇಜ್ ಕಡಿಮೆಯಾಗಬಹುದು ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಈ ವಿಚಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತಾದರೂ, ಸರ್ಕಾರವು ತಾಂತ್ರಿಕವಾಗಿ ಎಲ್ಲವನ್ನೂ ಪರಿಶೀಲಿಸಿಯೇ ಮುನ್ನಡೆಯುತ್ತಿರುವುದನ್ನು ಮಾನ್ಯ ಮಾಡಿ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘದ (SIAM) ಪ್ರಕಾರ, ಹಳೆಯ ವಾಹನಗಳಲ್ಲಿ ಮೈಲೇಜ್ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದೇ ವಿನಃ ಇದರಿಂದ ವಾಹನಗಳ ಸುರಕ್ಷತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಅಷ್ಟೇ ಅಲ್ಲದೆ, ಪ್ರಸ್ತುತ ಮಾರುಕಟ್ಟೆಗೆ ಬರುತ್ತಿರುವ ‘ಫ್ಲೆಕ್ಸ್-ಫ್ಯುಯೆಲ್’ (Flex-Fuel) ತಂತ್ರಜ್ಞಾನದ ವಾಹನಗಳು ಸಂಪೂರ್ಣ ಎಥೆನಾಲ್‌ನಲ್ಲೂ ಯಾವುದೇ ತೊಂದರೆಯಿಲ್ಲದೆ ಚಲಿಸಬಲ್ಲವು ಎಂದು ಸ್ಪಷ್ಟಪಡಿಸಲಾಗಿದೆ.
ಇ-85 (E85) ಇಂಧನ ಬಿಡುಗಡೆ
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಜೂನ್ 5 ರ ವಿಶ್ವ ಪರಿಸರ ದಿನದಂದು ಶೇ.85 ರಷ್ಟು ಎಥೆನಾಲ್ ಹೊಂದಿರುವ ‘E85’ ಇಂಧನವನ್ನು ದೇಶದ 48 ಸರ್ಕಾರಿ ತೈಲ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದ್ದಾರೆ. ಫ್ಲೆಕ್ಸ್-ಫ್ಯುಯೆಲ್ ಇಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ಬಳಸಬಹುದಾದ ಈ ವಿಶೇಷ ಇಂಧನವನ್ನು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಸದ್ಯದ E20 ಪೆಟ್ರೋಲ್‌ಗಿಂತ ಪ್ರತಿ ಲೀಟರ್‌ಗೆ ಸುಮಾರು 20 ರೂಪಾಯಿಗಳಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲು ತೈಲ ಕಂಪನಿಗಳು ನಿರ್ಧರಿಸಿವೆ. ಇದು ಭಾರತದ ಇಂಧನ ಭವಿಷ್ಯದ ದಿಕ್ಸೂಚಿಯನ್ನು ಬದಲಿಸುವ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ರಾಜ್ಯಸಭೆ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ – ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್!



















