ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅಕ್ಕಿ ಬೆಲೆಯನ್ನು ನಿಯಂತ್ರಣಕ್ಕೆ ತರಲು ಮತ್ತು ಕೃತಕ ಅಭಾವ ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ ಅಕ್ಕಿ ಮತ್ತು ಭತ್ತದ ದಾಸ್ತಾರಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ವ್ಯಾಪಾರಿಗಳು ಪ್ರತಿವಾರ ತಮ್ಮ ಬಳಿ ಇರುವ ದಾಸ್ತಾನಿನ ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂದು ಆದೇಶಿಸಿದೆ. ಇದರೊಂದಿಗೆ, ಮಳೆ ಕೊರತೆಯಿಂದಾಗಿ ತೀವ್ರವಾಗಿ ಬೆಲೆ ಏರಿಕೆಯಾಗಿರುವ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಅಕ್ಕಿ ದಾಸ್ತಾನು ಮಿತಿ ವಿಧಿಸಲು ಅನುಮತಿ ನೀಡಲಾಗಿದೆ.
ಮಳೆ ಕೊರತೆ ಮತ್ತು ಉತ್ಪಾದನೆಯಲ್ಲಿ ಇಳಿಕೆ: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಹಾಗೂ ಅಸಮರ್ಪಕ ಮಳೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶವು ಶೇ. 4ರಷ್ಟು ಕುಸಿದು 42.68 ಮಿಲಿಯನ್ ಹೆಕ್ಟೇರ್ ತಲುಪಿದೆ. ಇದರಿಂದಾಗಿ ದೇಶದಲ್ಲಿ ಅಕ್ಕಿ ಉತ್ಪಾದನೆಯು ಹಿಂದಿನ ವರ್ಷದ ದಾಖಲೆಯ 154 ಮಿಲಿಯನ್ ಟನ್ ಗಳಿಂದ ಈ ಬಾರಿ ಅಂದಾಜು 147 ಮಿಲಿಯನ್ ಟನ್ ಗಳಿಗೆ ಇಳಿಯುವ ನಿರೀಕ್ಷೆಯಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಸೋನಾ ಮಸೂರಿಯಂತಹ ಜನಪ್ರಿಯ ಪ್ರೀಮಿಯಂ ಅಕ್ಕಿ ಬೆಲೆ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ, ಅಕ್ಕಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಪ್ರಮುಖ ನಿರ್ದೇಶನಗಳು
• ವಾರಕ್ಕೊಮ್ಮೆ ದಾಸ್ತಾನು ಮಾಹಿತಿ: ದೇಶದ ಎಲ್ಲ ವ್ಯಾಪಾರಿಗಳು, ಸಗಟು ಮಾರಾಟಗಾರರು, ದೊಡ್ಡ ರಿಟೇಲರ್ ಗಳು ಮತ್ತು ಮಿಲ್ ಮಾಲೀಕರು ತಮ್ಮ ಬಳಿ ಇರುವ ಅಕ್ಕಿ ಹಾಗೂ ಭತ್ತದ ದಾಸ್ತಾನು ವಿವರಗಳನ್ನು ಪ್ರತಿ ಶುಕ್ರವಾರ ಕೇಂದ್ರ ಸರ್ಕಾರದ ಅಧಿಕೃತ ‘ಫುಡ್ ಸ್ಟಾಕ್ ಪೋರ್ಟಲ್’ನಲ್ಲಿ ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕು.
• ದಕ್ಷಿಣ ರಾಜ್ಯಗಳಿಗೆ ವಿಶೇಷ ಅಧಿಕಾರ: ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಅಕ್ಕಿ ಹಾಗೂ ಭತ್ತದ ಮೇಲೆ ನಿರ್ದಿಷ್ಟ ದಾಸ್ತಾನು ಮಿತಿಯನ್ನು ಜಾರಿಗೊಳಿಸಲು ಕೇಂದ್ರವು ಹಸಿರು ನಿಶಾನೆ ತೋರಿದೆ. ಈ ನಿಯಮವು 2027ರ ಜನವರಿ 31ರವರೆಗೆ ಜಾರಿಯಲ್ಲಿರಲಿದೆ.
• ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ: ಮಾರುಕಟ್ಟೆಯಲ್ಲಿ ಬೆಲೆಗಳನ್ನು ನಿಯಂತ್ರಿಸಲು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿಯ ಮಾರಾಟ ಗುರಿಯನ್ನು ದ್ವಿಗುಣಗೊಳಿಸಲಾಗಿದ್ದು, ಖಾಸಗಿ ಖರೀದಿದಾರರಿಗೆ ಹೆಚ್ಚಿನ ಅಕ್ಕಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.



















