ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿ ಸಂತತಿಯನ್ನು ಪುನರುಜ್ಜೀವನಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಆರಂಭದಲ್ಲೇ ಭಾರೀ ಹಿನ್ನಡೆಯಾಗಿದೆ. ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತಾರಣ್ಯದಿಂದ ಬಕ್ಸಾಕ್ಕೆ ಸ್ಥಳಾಂತರಿಸಲಾಗಿದ್ದ ಮೂರು ವರ್ಷದ ಹೆಣ್ಣು ಹುಲಿ ‘ಡೂವರ್ಸ್ ರಾಣಿ’ (ಟಿ-138), ತನ್ನ ಹೊಸ ನೆಲೆಯಲ್ಲಿ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಎರಡು ಬಾರಿ ಅರಣ್ಯ ಇಲಾಖೆಯ ಕಣ್ತಪ್ಪಿಸಿ ಪರಾರಿಯಾಗಿದ್ದ ಈ ಹುಲಿ, ಇದೀಗ ತನ್ನ ಗರ್ಭದಲ್ಲಿದ್ದ ಸುಮಾರು ಎರಡು ತಿಂಗಳ ಮೂರು ಭ್ರೂಣಗಳನ್ನು ಕಳೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ನ.7ರ ರಾತ್ರಿ ಹುಲಿಗೆ ಗರ್ಭಪಾತವಾಗಿದ್ದು, ಈ ಘಟನೆಯು ಯೋಜನೆಯ ಪೂರ್ವಸಿದ್ಧತೆ ಮತ್ತು ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವೈದ್ಯರ ತಪಾಸಣೆ ವೇಳೆಯೂ ಪತ್ತೆ ಆಗಿರಲಿಲ್ಲ ಗರ್ಭಧಾರಣೆ
ಸೆಪ್ಟೆಂಬರ್ 29ರಿಂದ ಅಕ್ಟೋಬರ್ 2ರ ನಡುವೆ ವಾಲ್ಮೀಕಿ ಅರಣ್ಯದಿಂದ ಈ ಹುಲಿಯನ್ನು ಸೆರೆಹಿಡಿದು ಬಕ್ಸಾಕ್ಕೆ ಕರೆತರಲಾಗಿತ್ತು. ಸ್ಥಳಾಂತರಕ್ಕೂ ಮುನ್ನ ಆರು ಮಂದಿ ಪಶುವೈದ್ಯರು ಮತ್ತು ತಜ್ಞರ ತಂಡ ಹುಲಿಯ ಆರೋಗ್ಯ ತಪಾಸಣೆ ನಡೆಸಿತ್ತಾದರೂ, ಅದು ಗರ್ಭಿಣಿಯಾಗಿರುವುದು ಪತ್ತೆಯಾಗಿರಲಿಲ್ಲ. ಆರಂಭಿಕ ಹಂತದಲ್ಲಿ ಗರ್ಭಧಾರಣೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು ಎಂದು ತಂಡದ ಸದಸ್ಯರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಸುಮಾರು 17 ಗಂಟೆಗಳ ಸುದೀರ್ಘ ಪ್ರಯಾಣದ ವೇಳೆ ಹುಲಿಗೆ ಎರಡು ಬಾರಿ ಅರಿವಳಿಕೆ ಮದ್ದು ನೀಡಲಾಗಿತ್ತು. ಬಕ್ಸಾಕ್ಕೆ ಬಿಡುಗಡೆಯಾದ ಬೆನ್ನಲ್ಲೇ ಸುಮಾರು 100 ಕಿಲೋಮೀಟರ್ಗೂ ಹೆಚ್ಚು ದೂರ ಕ್ರಮಿಸಿದ್ದ ಹುಲಿ, ನೆರೆಯ ಅಸ್ಸಾಂನ ರೈಮೋನಾ ರಾಷ್ಟ್ರೀಯ ಉದ್ಯಾನವನಕ್ಕೆ ನುಗ್ಗಿತ್ತು. ಬಳಿಕ ಅದನ್ನು ಪತ್ತೆಹಚ್ಚಿ, ಮತ್ತೆ ಸೆರೆಹಿಡಿದು ಪಶ್ಚಿಮ ಬಂಗಾಳಕ್ಕೆ ವಾಪಸ್ ತರಲಾಗಿತ್ತು. ಸೆರೆಹಿಡಿಯುವಿಕೆ, ಪದೇ ಪದೇ ಅರಿವಳಿಕೆ ನೀಡಿದ್ದು ಮತ್ತು ಪ್ರಯಾಣದ ಒತ್ತಡವೇ ಗರ್ಭಪಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಜಿಂಕೆ ಆವರಣದಲ್ಲಿ ಹುಲಿ
ಹುಲಿಯ ಸ್ಥಳಾಂತರ ಪ್ರಕ್ರಿಯೆಯನ್ನು ಅಕ್ಟೋಬರ್ 2ರ ಗಡುವಿನೊಳಗೆ ಪೂರ್ಣಗೊಳಿಸಲು ತರಾತುರಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಯಿತೇ ಎಂಬ ಅನುಮಾನ ಈಗ ಕಾಡುತ್ತಿದೆ. ಅಸ್ಸಾಂನಿಂದ ವಾಪಸ್ ತಂದ ನಂತರ ಹುಲಿಯನ್ನು ಇರಿಸಲು ವಿಶೇಷವಾಗಿ ನಿರ್ಮಿಸಿದ ಹುಲಿ ಹೊಂದಾಣಿಕೆ ಕೇಂದ್ರದ ಬದಲು, ಮೂಲತಃ ಜಿಂಕೆಗಳಿಗಾಗಿ ನಿರ್ಮಿಸಲಾಗಿದ್ದ ಆವರಣವನ್ನು ಬಳಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹೊಸ ಆವರಣ ನಿರ್ಮಿಸಲು ಅನುದಾನ ಬಿಡುಗಡೆಯಾಗದ ಕಾರಣ ಲಭ್ಯವಿದ್ದ ವ್ಯವಸ್ಥೆಯನ್ನೇ ಬಳಸಿಕೊಳ್ಳಲಾಗಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಇದೇ ಕಾರಣಕ್ಕೆ ಆವರಣದ ಬೇಲಿಯ ಕೆಳಗೆ ಮಣ್ಣು ಅಗೆದು ಹುಲಿ ಎರಡನೇ ಬಾರಿಯೂ ಪರಾರಿಯಾಗಲು ಸಾಧ್ಯವಾಯಿತು ಎನ್ನಲಾಗಿದೆ.
ತನಿಖೆಗೆ ಆದೇಶ
ಭ್ರೂಣಗಳನ್ನು ಪರೀಕ್ಷೆಗಾಗಿ ಸಂರಕ್ಷಿಸಿಡಲಾಗಿದ್ದು, ಈ ಕುರಿತು ಪಶ್ಚಿಮ ಬಂಗಾಳ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಕೇಂದ್ರದ ತನಿಖಾ ತಂಡ ಮತ್ತು ರಾಜ್ಯ ಮಟ್ಟದ ಸಮಿತಿಯೊಂದು ಈ ಇಡೀ ಪ್ರಕರಣದ ಕುರಿತು ತನಿಖೆ ಆರಂಭಿಸಿದೆ. ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಹುಲಿ ಮರುಪರಿಚಯ ಯೋಜನೆ ಯಶಸ್ವಿಯಾದಂತೆ ಬಕ್ಸಾದಲ್ಲೂ ಯಶಸ್ಸು ಕಾಣುವ ನಿರೀಕ್ಷೆಯಿತ್ತು. ಸದ್ಯ ‘ಡೂವರ್ಸ್ ರಾಣಿ’ ಬಕ್ಸಾ ಅರಣ್ಯ ಪ್ರದೇಶದಲ್ಲೇ ಇದ್ದು, ರೇಡಿಯೋ ಕಾಲರ್ ಸಿಗ್ನಲ್ಗಳ ಸಹಾಯದಿಂದ ಸುಮಾರು 60 ಅರಣ್ಯ ಸಿಬ್ಬಂದಿ ಮತ್ತು ಮೂರು ಪಳಗಿದ ಆನೆಗಳು ಆಕೆಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ.


















