ಬಳ್ಳಾರಿ : ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಲಾಪುರ ಗ್ರಾಮದ ಸಮೀಪದ ಎಲ್ಎಲ್ಸಿ ಕಾಲುವೆ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮದ್ಯದ ಅಮಲಿನಲ್ಲಿ ಬೈಕ್ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತನನ್ನು ಸೋಮಲಾಪುರ ಗ್ರಾಮದ ನಿವಾಸಿ ಅದ್ದೀಕೇರಿ ಮಾರೇಶ್ (45) ಎಂದು ಗುರುತಿಸಲಾಗಿದೆ. ಮಾರೇಶ್ ಅವರು KA-34 ER-5843 ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ.
ಮಾರೇಶ್ ನಿನ್ನೆ ರಾತ್ರಿ ಸುಮಾರು 10 ಗಂಟೆ ವೇಳೆಗೆ ಕುರುಗೋಡಿನಿಂದ ತಮ್ಮ ಊರಾದ ಸೋಮಲಾಪುರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಅವರು ಸೋಮಲಾಪುರ ಬಳಿಯ ಎಲ್ಎಲ್ಸಿ ಕಾಲುವೆಯ ಸೇತುವೆ ತಡೆಗೋಡೆಗೆ ಬೈಕ್ನಲ್ಲಿ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಮಾರೇಶ್ ರಸ್ತೆ ಮೇಲಿನಿಂದ ನೇರವಾಗಿ ಕಾಲುವೆಯೊಳಗೆ ಬಿದ್ದಿದ್ದು, ಗಂಭೀರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಕುರುಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬಿಡದಿ ಟೌನ್ಶಿಪ್ ಫೈಟಿಂಗ್ – ರಾಜಕೀಯ ಜಟಾಪಟಿ ನಡುವೆಯೂ ಜಿಬಿಐಟಿ ಮಹತ್ವದ ಹೆಜ್ಜೆ!



















