ವಿಜಯನಗರ : ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿಯಲ್ಲಿ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಉಜ್ಜಯಿನಿಯ ದಾರುಕ ಕಾನ್ವೆಂಟ್ ಬಳಿ ಇರುವ ಈ ನೀರಿನ ಟ್ಯಾಂಕ್ ಪಕ್ಕದಲ್ಲೇ ಶಾಲೆ ಹಾಗೂ ಹಾಸ್ಟೆಲ್‌ಗಳಿವೆ. ಹೀಗಾಗಿ ಪ್ರತಿನಿತ್ಯ ಶಾಲಾ ಮಕ್ಕಳು ಇದೇ ಟ್ಯಾಂಕ್ ಪಕ್ಕದಲ್ಲೇ ಓಡಾಡುತ್ತಿದ್ದು, ಜೀವ ಭಯದಲ್ಲೇ ಸಂಚರಿಸುವಂತಾಗಿದೆ.
ಆರೇಳು ವರ್ಷಗಳಿಂದ ಪಾಳು ಬಿದ್ದಿದ್ದ ಟ್ಯಾಂಕ್‌ನ್ನು ಯಾವುದೇ ದುರಸ್ತಿ ಮಾಡದೇ ಮತ್ತೆ ಬಳಕೆಗೆ ತರಲಾಗಿದ್ದು, ಟ್ಯಾಂಕ್‌ಗೆ ಕೇವಲ ಪೇಂಟ್ ಮಾಡಿ ನೀರು ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜೆಜೆಎಂ ಯೋಜನೆಯಡಿ ಟ್ಯಾಂಕ್‌ಗೆ ಪೇಂಟ್ ಮಾಡಲಾಗಿದ್ದು, ಗುಣಮಟ್ಟದ ಪರಿಶೀಲನೆ ನಡೆಸದೇ ನೀರು ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು, ಕಳೆದ ಒಂದು ವಾರದಿಂದ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದ್ದು, ಟ್ಯಾಂಕ್‌ನ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಟ್ಯಾಂಕ್ ಪಕ್ಕದಲ್ಲೇ ಶಾಲೆ ಮತ್ತು ಹಾಸ್ಟೆಲ್‌ಗಳಿರುವುದರಿಂದ ಯಾವುದೇ ಅನಾಹುತ ಸಂಭವಿಸಿದರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗುವ ಆತಂಕ ಇದೆ. ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್‌ನ್ನು ದುರಸ್ತಿ ಮಾಡದೇ ಕೇವಲ ಪೇಂಟ್ ಮಾಡಿ ಬಳಕೆ ಮಾಡುತ್ತಿರುವ ಅಧಿಕಾರಿಗಳ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಜೀವಕ್ಕೆ ಅಪಾಯ ಎದುರಾಗುವ ಮುನ್ನವೇ ಟ್ಯಾಂಕ್‌ನ ಗುಣಮಟ್ಟ ಪರಿಶೀಲಿಸಿ, ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಕ್ವಾಲಿಟಿ ಚೆಕ್ ಮಾಡದೇ ಟ್ಯಾಂಕ್ ಬಳಕೆಗೆ ಅನುಮತಿ ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಮುಂದಿಟ್ಟಿದ್ದಾರೆ.
ಇದನ್ನೂ ಓದಿ : ಸೂಟ್‌ಕೇಸಲ್ಲಿ ವೃದ್ಧೆಯ ಶವ ಪತ್ತೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್ : ಪಕ್ಕದ ಮನೆ ಯುವಕನಿಂದಲೇ ಭೀಕರ ಹತ್ಯೆ!



















