ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಶಿವಾಜಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಮಹಿಳೆಯೊಬ್ಬರನ್ನು ಅವರದ್ದೇ ಫ್ಲಾಟ್‌ನಲ್ಲಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಮೃತರನ್ನು ದೇವೋಸ್ಮಿತಾ ಪಾಲ್ ಎಂದು ಗುರುತಿಸಲಾಗಿದ್ದು, ಇವರು ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನಲ್ಲಿರುವ ಸತ್ಯಂ ಅಪಾರ್ಟ್‌ಮೆಂಟ್ಸ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮೃತರ ಪತಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.
ಫೋನ್ ಕರೆಗೆ ಸಿಗದಿದ್ದಾಗ ಬಯಲಾಯ್ತು ಘಟನೆ
ಈ ಘಟನೆ ಬೆಳಕಿಗೆ ಬಂದಿದ್ದು ಮೃತರ ಸಹೋದರಿಯ ಮೂಲಕ. ಜೂನ್ 5 ರಂದು ಮಧ್ಯಾಹ್ನ ಸುಮಾರು 2.35ರ ಸುಮಾರಿಗೆ ದೆಹಲಿಯ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ 49 ವರ್ಷದ ದೇವರತಿ ಪಾಲ್ ಎಂಬವರಿಂದ ಕರೆ ಬಂದಿತ್ತು. ತಮ್ಮ ಸಹೋದರಿ ದೇವೋಸ್ಮಿತಾ ಅವರು ಮನೆಯಲ್ಲಿ ಶವವಾಗಿ ಬಿದ್ದಿರುವುದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗುರುವಾರ ಬೆಳಗ್ಗಿನಿಂದಲೇ ದೇವೋಸ್ಮಿತಾ ಅವರ ಫ್ಲಾಟ್‌ಗೆ ಹೊರಗಿನಿಂದ ಬೀಗ ಹಾಕಲಾಗಿತ್ತು ಮತ್ತು ಅವರು ಯಾವುದೇ ಫೋನ್ ಕರೆಗಳಿಗೂ ಉತ್ತರಿಸುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಸಹೋದರಿ ದೇವರತಿ ಅವರು ಅಪಾರ್ಟ್‌ಮೆಂಟ್‌ಗೆ ಬಂದು ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಈ ಹತ್ಯಾಕಾಂಡ ಬೆಳಕಿಗೆ ಬಂದಿದೆ.
ತಲೆಗೆ ಬಲವಾದ ಪೆಟ್ಟು, ಮಣಿಕಟ್ಟಿನ ನರಗಳು ಕಟ್!
ಅತ್ಯಂತ ಕ್ರೂರವಾಗಿ ಪ್ರಾಧ್ಯಾಪಕಿಯನ್ನಿ ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ದುಷ್ಕರ್ಮಿಗಳು ದೇವೋಸ್ಮಿತಾ ಅವರ ತಲೆಗೆ ಯಾವುದೋ ಭಾರವಾದ ವಸ್ತುವಿನಿಂದ ಬಲವಾಗಿ ಹೊಡೆದಿದ್ದಾರೆ. ತಲೆಯ ಭಾಗದಲ್ಲಿ ಆಳವಾದ ಗಾಯಗಳಾಗಿದ್ದು, ಅವರ ಕೈ ಮಣಿಕಟ್ಟಿನ ರಕ್ತನಾಳಗಳನ್ನು (ನರಗಳನ್ನು) ಕತ್ತರಿಸಿರುವುದು ಪತ್ತೆಯಾಗಿದೆ. ಸದ್ಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಎಲ್‌ಬಿಎಸ್ (LBS) ಆಸ್ಪತ್ರೆಗೆ ರವಾನಿಸಿದ್ದಾರೆ.
ತನಿಖೆಗೆ ವಿಶೇಷ ತಂಡಗಳ ರಚನೆ
ಇದು ಮೇಲ್ನೋಟಕ್ಕೆ ದರೋಡೆ ಅಥವಾ ಕಳವಿನ ಉದ್ದೇಶದಿಂದ ನಡೆದ ಕೊಲೆಯಂತೆ ಕಾಣಿಸುತ್ತಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಏಕೆಂದರೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಯಥಾಸ್ಥಿತಿಯಲ್ಲಿದ್ದು, ಯಾವುದೇ ವಸ್ತುಗಳ ಲೂಟಿಯಾಗಿಲ್ಲ. ಹೀಗಾಗಿ ವೈಯಕ್ತಿಕ ದ್ವೇಷದಿಂದ ಅಥವಾ ಪರಿಚಿತರೇ ಈ ಕೃತ್ಯ ಎಸಗಿರುವ ಸಾಧ್ಯತೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಹಲವು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಸುಳಿವುಗಳು ಲಭ್ಯವಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



















