ಬೆಂಗಳೂರು : ನಗರದಲ್ಲಿ ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಜಿಬಿಎ (GBA) ಫುಟ್‌ಪಾತ್ ಒತ್ತುವರಿ ತೆರವಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ.
ನಾಳೆಯೊಳಗೆ (ಜುಲೈ 1ರವರೆಗೆ) ಫುಟ್‌ಪಾತ್ ಒತ್ತುವರಿದಾರರು ಸ್ವಯಂಪ್ರೇರಿತವಾಗಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜುಲೈ 1ರ ಗಡುವು ಮುಗಿದ ಬಳಿಕ ಬುಧವಾರದಿಂದ ನಗರಾದ್ಯಂತ ವಿಶೇಷ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಗಡುವಿನ ಬಳಿಕ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಫುಟ್‌ಪಾತ್ ಮೇಲೆ ಅಂಗಡಿ, ವ್ಯಾಪಾರ ವಸ್ತುಗಳು, ಜಾಹೀರಾತು ಫಲಕಗಳು ಅಥವಾ ಇತರೆ ಅಕ್ರಮ ಅಡ್ಡಿಗಳನ್ನು ಇಟ್ಟಿರುವವರ ವಿರುದ್ಧ ಭಾರಿ ದಂಡ ವಿಧಿಸಲಾಗುತ್ತದೆ. ನಿಯಮ ಉಲ್ಲಂಘನೆ ಮುಂದುವರಿದರೆ ವ್ಯಾಪಾರ ಪರವಾನಗಿ (ಲೈಸೆನ್ಸ್) ರದ್ದುಗೊಳಿಸುವ ಕ್ರಮವೂ ಕೈಗೊಳ್ಳಲಾಗುತ್ತದೆ.
ವಿಶೇಷವಾಗಿ ಹೋಟೆಲ್‌ಗಳು ಮತ್ತು ವಾಣಿಜ್ಯ ಮಳಿಗೆಗಳು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಫುಟ್‌ಪಾತ್ ಮೇಲೆ ವಾಹನಗಳ ಪಾರ್ಕಿಂಗ್‌ಗೂ ಸಂಪೂರ್ಣ ನಿಷೇಧ ಹೇರಲಾಗಿದೆ. ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮೂಲಕ ತೆರವುಗೊಳಿಸಿ ದಂಡ ವಿಧಿಸಲಾಗುತ್ತದೆ. ನಗರದ ಸುಮಾರು 2,000 ಕಿಲೋಮೀಟರ್ ರಸ್ತೆಗಳಲ್ಲಿ ಪಾದಚಾರಿ ಸುರಕ್ಷತಾ ಅಭಿಯಾನ ನಡೆಸಲು ಜಿಬಿಎ ಮುಂದಾಗಿದ್ದು, ಫುಟ್‌ಪಾತ್‌ಗಳನ್ನು ಸಂಪೂರ್ಣವಾಗಿ ಪಾದಚಾರಿಗಳಿಗೆ ಮುಕ್ತಗೊಳಿಸುವ ಗುರಿ ಹೊಂದಿದೆ.
ಅಕ್ರಮ ಫುಟ್‌ಪಾತ್ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ನಾಳೆಯೊಳಗೆ ಒತ್ತುವರಿದಾರರು ಸ್ವಯಂ ತೆರವುಗೊಳಿಸದಿದ್ದರೆ ಜುಲೈ 1ರಿಂದ ಕಠಿಣ ಕಾರ್ಯಾಚರಣೆ ಆರಂಭವಾಗಲಿದೆ.
ಇದನ್ನೂ ಓದಿ : ನಾಳೆಯಿಂದ ಬೆಂಗಳೂರಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ; ಮನೆ-ಮನೆಗೆ ಬಿಎಲ್‌ಒ ಭೇಟಿ!



















