ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳ ವ್ಯಾಪ್ತಿಯ 369 ವಾರ್ಡ್‌ಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ನಾಳೆಯಿಂದ ಆರಂಭವಾಗಲಿದೆ. ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು, ಅಗತ್ಯವಿದ್ದರೆ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಅಳಿಸುವಿಕೆಗಾಗಿ ಅರ್ಜಿ ಸಲ್ಲಿಸುವಂತೆ ಜಿಬಿಎ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಮನವಿ ಮಾಡಿದ್ದಾರೆ.
ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವ ಉದ್ದೇಶದಿಂದ ಈ ಪರಿಷ್ಕರಣೆ ಕೈಗೊಳ್ಳಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ವಾರ್ಡ್‌ಗಳಲ್ಲಿ ಹೆಸರು ಹೊಂದಿರುವವರ ಹೆಸರುಗಳನ್ನು ಸರಿಪಡಿಸುವುದು, ಮೃತಪಟ್ಟ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅರ್ಹ ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ.
ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಸುಮಾರು 8 ಸಾವಿರ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬಿಎಲ್‌ಒಗಳ ಕೊರತೆ ಇರುವ ಕಡೆ ತಕ್ಷಣ ಸಿಬ್ಬಂದಿಯನ್ನು ನಿಯೋಜಿಸಬೇಕು. ಕರ್ತವ್ಯಕ್ಕೆ ಹಾಜರಾಗದ ಬಿಎಲ್‌ಒಗಳಿಗೆ ನೋಟಿಸ್ ನೀಡಬೇಕು. ಪ್ರತಿಕ್ರಿಯೆ ನೀಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಬಿಎಲ್‌ಒಗಳು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ.
ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮಗಳಡಿ ಸಾಮಾಜಿಕ ಜಾಲತಾಣ, ವೆಬ್‌ಸೈಟ್, ಪಾಡ್‌ಕಾಸ್ಟ್, ಫೋನ್-ಇನ್ ಕಾರ್ಯಕ್ರಮ, ಜಾಗೃತಿ ರ‍್ಯಾಲಿ, ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಆಯೋಜಿಸಲಾಗುತ್ತಿದೆ. ಹಿರಿಯ ನಾಗರಿಕರು, ದಿವ್ಯಾಂಗರು, ಮಹಿಳೆಯರು, ಆದಿವಾಸಿಗಳು ಹಾಗೂ ವಲಸೆ ಕಾರ್ಮಿಕರನ್ನು ತಲುಪಲು ವಿಶೇಷ ಅಭಿಯಾನಗಳನ್ನೂ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಪ್ರತಿದಿನ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಯಾವುದೇ ಲೋಪವಾಗದಂತೆ ಎಸ್‌ಐಆರ್ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಮಹೇಶ್ವರ್ ರಾವ್ ಸೂಚಿಸಿದ್ದಾರೆ.
ಎಸ್‌ಐಆರ್ ವೇಳಾಪಟ್ಟಿ:
ಜೂನ್ 30ರಿಂದ ಜುಲೈ 29: ಮನೆ-ಮನೆಗೆ ಬಿಎಲ್‌ಒಗಳ ಭೇಟಿ.
ಜುಲೈ 29: ಮತಗಟ್ಟೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ.
ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟ.
ಆಗಸ್ಟ್ 5ರಿಂದ ಸೆಪ್ಟೆಂಬರ್ 4: ಆಕ್ಷೇಪಣೆ ಸಲ್ಲಿಕೆ.
ಆಗಸ್ಟ್ 5ರಿಂದ ಅಕ್ಟೋಬರ್ 3: ಆಕ್ಷೇಪಣೆಗಳ ವಿಲೇವಾರಿ.
ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟ..
ಇದನ್ನೂ ಓದಿ : GBA ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿ – ಮೊದಲ ದಿನವೇ ಶೇ.96.40ರಷ್ಟು ಮಕ್ಕಳಿಗೆ ಲಸಿಕೆ!


















