ಬೆಂಗಳೂರು: ನಗರದ ಉತ್ತರಹಳ್ಳಿಯಲ್ಲಿ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಬಾಡಿಗೆದಾರ ದಂಪತಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಪ್ರಸಾದ್ ಶ್ರೀಶೈಲ(26), ಸಾಕ್ಷಿ(23) ಬಂಧತ ಆರೋಪಿಗಳು. ಹತ್ಯೆಯಾದ ಶ್ರೀಲಕ್ಷ್ಮಿ ಅವರ ಮನೆಯಲ್ಲಿ ಪ್ರಸಾದ್ ಮತ್ತು ಸಾಕ್ಷಿ ಬಾಡಿಗೆಗೆ ಇದ್ದರು. ಪ್ರಸಾದ್ ಶ್ರೀಶೈಲ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಕಳೆದ ಆರು ತಿಂಗಳಿನಿಂದ ಶ್ರೀಲಕ್ಷ್ಮಿ ಮನೆಯಲ್ಲಿ ದಂಪತಿಗಳು ಬಾಡಿಗೆಗೆ ಇದ್ದರು.
ಮಂಗಳವಾರ ನ್ಯೂ ಮಿಲೇನಿಯಂ ಶಾಲಾ ರಸ್ತೆಯಲ್ಲಿರುವ ಮನೆಯೊಳಗೆ ಸಂತ್ರಸ್ತೆ ಶ್ರೀಲಕ್ಷ್ಮಿ ಶವವಾಗಿ ಪತ್ತೆಯಾಗಿದ್ದಾರೆ. ಕಾಟನ್‌ಪೇಟ್‌ನಲ್ಲಿರುವ ಧೂಪದ್ರವ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಆಕೆಯ ಪತಿ, ಪದೇ ಪದೇ ಕರೆ ಮಾಡಿದರೂ ಉತ್ತರಿಸಿರಲಿಲ್ಲ. ಸಂಜೆ ಮನೆಗೆ ಬಂದ ನಂತರ ಆಕೆ ಶವ ನೋಡಿದ್ದಾರೆ. ಆಕೆಯ ಕುತ್ತಿಗೆ, ತುಟಿ ಮತ್ತು ಮುಖದ ಮೇಲೆ ಗಾಯಗಳಾಗಿದ್ದು, ಹಾಲ್‌ನಲ್ಲಿ ಶವ ಬಿದ್ದಿರುವುದು ಕಂಡುಬಂದಿದ್ದು, ಆಕೆಯ ಚಿನ್ನದ ಮಂಗಳಸೂತ್ರ ಕಾಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶ್ರೀಲಕ್ಷ್ಮಿ ಪತಿ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸುಳಿವುಗಳ ಮೇರೆಗೆ, ಸಂತ್ರಸ್ತೆ ಮನೆಯಲ್ಲಿ ಬಾಡಿಗೆ ಪಡೆದು ವಾಸಿಸುತ್ತಿದ್ದ ದಂಪತಿಗಳಾದ ಪ್ರಸಾದ್ ಶ್ರೀಶೈಲ್ ಮಕೈ ಅವರ ಪತ್ನಿ ಸಾಕ್ಷಿ ಹನುಮಂತ್ ಹೊದ್ದೂರ್ ಎಂಬುವರನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ದಂಪತಿಗಳು ಶ್ರೀಲಕ್ಷ್ಮಿಯನ್ನು ಕೊಂದು ಆಭರಣಗಳೊಂದಿಗೆ ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: 5 ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನ ಬಂಧನ | 22.5 ಲಕ್ಷ ಮೌಲ್ಯದ ಚಿನ್ನಾಭರಣ ವಶ



















