ಬೆಂಗಳೂರು : ಸೈಬರ್ ವಂಚಕರು ದೆಹಲಿ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ಸುಪ್ರೀಂ ಕೋರ್ಟ್ ಬಂಧನ ಆದೇಶವಿದೆ ಎಂದು ಬೆದರಿಕೆ ಹಾಕಿ, 60 ವರ್ಷದ ವೃದ್ಧೆಯನ್ನು ಬರೋಬ್ಬರಿ 68 ದಿನಗಳ ಕಾಲ “ಡಿಜಿಟಲ್ ಅರೆಸ್ಟ್”ನಲ್ಲಿ ಇಟ್ಟು ₹98.40 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ನಿವಾಸಿ ಸ್ವರ್ಣಲತಾ ಎಂಬುವವರು ಈ ವಂಚನೆಗೆ ಬಲಿಯಾಗಿದ್ದಾರೆ.
ಕಳೆದ ಮಾರ್ಚ್ 18ರಂದು ಸ್ವರ್ಣಲತಾ ಅವರಿಗೆ ವಾಟ್ಸಾಪ್ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ದೆಹಲಿಯ ಡಿಸಿಪಿ ಭೀಷಮ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಬ್ಯಾಂಕ್ ಖಾತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದೆ, ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಹಾಗೂ ನಿಮ್ಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಲಾಗಿದೆ ಎಂದು ಆತ ಬೆದರಿಕೆ ಹಾಕಿದ್ದಾನೆ.
ಇದರ ಜೊತೆಗೆ, ಸೂಚನೆಗಳನ್ನು ಪಾಲಿಸದಿದ್ದರೆ ನಿಮ್ಮ ಕುಟುಂಬಕ್ಕೂ ಕಾನೂನು ತೊಂದರೆ ಎದುರಾಗಲಿದೆ ಎಂದು ಹೇಳಿ ವೃದ್ಧೆಯಲ್ಲಿ ಭಯ ಹುಟ್ಟಿಸಲಾಗಿದೆ. ಬಳಿಕ ರವಿಕುಮಾರ್ ಎಂಬ ಮತ್ತೊಬ್ಬ ವ್ಯಕ್ತಿ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ನಿಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಹಾಗೂ ವಿಚಾರಣೆಗೆ ದೆಹಲಿಗೆ ಬರಬೇಕು ಎಂದು ವಾಟ್ಸಾಪ್ ವಿಡಿಯೋ ಕರೆ ಮೂಲಕ ಒತ್ತಡ ಹೇರಿದ್ದಾನೆ.
ವಂಚಕರು ಡಿಸಿಪಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ವೃದ್ಧೆಯನ್ನು ಮಾತನಾಡಿಸಿದ್ದು, ನೈಜ ಪೊಲೀಸ್ ಅಧಿಕಾರಿಗಳೇ ಸಂಪರ್ಕಿಸಿರುವಂತೆ ನಂಬುವ ವಾತಾವರಣ ಸೃಷ್ಟಿಸಿದ್ದಾರೆ. ತನಿಖೆಯ ದೃಷ್ಟಿಯಿಂದ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು ಹಾಗೂ ಖಾತೆಯಲ್ಲಿರುವ ಹಣವನ್ನು ತಾವು ಸೂಚಿಸುವ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದಾರೆ.
ತನಿಖೆ ಪೂರ್ಣಗೊಂಡ ಬಳಿಕ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ವೃದ್ಧೆ ಅವರ ಮಾತನ್ನು ನಂಬಿದ್ದಾರೆ. ಸೈಬರ್ ಖದೀಮರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಅಲ್ಲದೆ, ತನ್ನ ಬಳಿಯಿದ್ದ ಚಿನ್ನದ ಮೇಲೆ ಸಾಲ ಪಡೆದು ಬಂದ ಹಣವನ್ನೂ ಆರೋಪಿಗಳು ಸೂಚಿಸಿದ ಖಾತೆಗಳಿಗೆ ಜಮೆ ಮಾಡಿದ್ದಾರೆ.
ಮಾರ್ಚ್ 24ರಿಂದ ಮೇ 29ರವರೆಗೆ ಆರ್‌ಟಿಜಿಎಸ್ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಹಣ ವರ್ಗಾವಣೆ ನಡೆದಿದ್ದು, ಒಟ್ಟು ₹98.40 ಲಕ್ಷವನ್ನು ವಂಚಕರು ಪಡೆದುಕೊಂಡಿದ್ದಾರೆ. ಸುಮಾರು 68 ದಿನಗಳ ಕಾಲ ನಿರಂತರವಾಗಿ ಸಂಪರ್ಕದಲ್ಲಿಟ್ಟುಕೊಂಡು ವೃದ್ಧೆಯನ್ನು ಡಿಜಿಟಲ್ ಅರೆಸ್ಟ್‌ನಲ್ಲಿದ್ದಂತೆ ನಂಬಿಸಿ ಈ ಕೃತ್ಯ ಎಸಗಲಾಗಿದೆ.
ವಂಚನೆ ನಡೆದಿರುವುದು ಅರಿವಾದ ಬಳಿಕ ಸ್ವರ್ಣಲತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಎಚ್ಚರಿಕೆ :
ಸೈಬರ್ ಅಪರಾಧ ತಜ್ಞರ ಪ್ರಕಾರ, ಪೊಲೀಸ್, ಸಿಬಿಐ, ಇಡಿ ಅಥವಾ ನ್ಯಾಯಾಲಯದ ಹೆಸರಿನಲ್ಲಿ ಕರೆ ಮಾಡಿ ಬಂಧನ, ಖಾತೆ ಸೀಜ್ ಅಥವಾ ತನಿಖೆಯ ನೆಪದಲ್ಲಿ ಹಣ ವರ್ಗಾಯಿಸಲು ಕೇಳುವುದು ಡಿಜಿಟಲ್ ಅರೆಸ್ಟ್ ವಂಚನೆಯ ಸಾಮಾನ್ಯ ತಂತ್ರವಾಗಿದೆ. ಸಾರ್ವಜನಿಕರು ಇಂತಹ ಕರೆಗಳಿಗೆ ಮರುಳಾಗದೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸೈಬರ್ ಸಹಾಯವಾಣಿ 1930 ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ : ಸಮಾಜ ಕಲ್ಯಾಣ ಇಲಾಖೆ ಸಚಿವರ ಬದಲಾವಣೆಗೆ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಆಗ್ರಹ – ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ!



















