ಬೆಂಗಳೂರು : ನಗರದ ತಿಗಳರಪಾಳ್ಯದ ತುಳಸಿನಗರದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಭವಾನಿ (22) ಎಂಬ ಯುವತಿಯನ್ನು ಆಕೆಯ ಭಗ್ನಪ್ರೇಮಿ ಚಂದ್ರಶೇಖರ್ ಕೊಲೆ ಮಾಡಿದ್ದು, ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಮೊಬೈಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ ಚಂದ್ರಶೇಖರ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿದ್ದು, ಕೆಲಕಾಲ ಲಿವಿಂಗ್ ರಿಲೇಷನ್‌ಶಿಪ್‌ನಲ್ಲೂ ಇದ್ದರು. ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು.
ಭವಾನಿ ಮದುವೆಯಾಗುವಂತೆ ಚಂದ್ರಶೇಖರ್ ಮೇಲೆ ಒತ್ತಡ ಹಾಕುತ್ತಿದ್ದಳು ಎನ್ನಲಾಗಿದೆ. ಆದರೆ, ಚಂದ್ರಶೇಖರ್ ಮದುವೆಗೆ ನಿರಾಕರಿಸಿದ್ದಾನೆ. ಇದೇ ವೇಳೆ ಭವಾನಿಗೆ ಬೇರೆ ಸಂಬಂಧ ಹುಡುಕಿ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಈ ವಿಷಯ ತಿಳಿದ ಚಂದ್ರಶೇಖರ್ ಕೋಪಗೊಂಡಿದ್ದಾನೆ. ಈ ಹಿನ್ನೆಲೆ ಭವಾನಿ ವಾಸಿಸುತ್ತಿದ್ದ ಬಾಡಿಗೆ ಮನೆಗೆ ತೆರಳಿದ ಚಂದ್ರಶೇಖರ್, ಆಕೆಯೊಂದಿಗೆ ವಾಗ್ವಾದ ನಡೆಸಿದ್ದು, ಬಳಿಕ ಭವಾನಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ಪ್ರಕರಣವನ್ನು ಆತ್ಮಹತ್ಯೆಯಂತೆ ಬಿಂಬಿಸಲು ಚಂದ್ರಶೇಖರ್ ಯತ್ನಿಸಿದ್ದಾನೆ. ಭವಾನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ದೃಶ್ಯ ಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಆದರೆ, ತಾನು ಪೊಲೀಸರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ನಂತರ ಚಂದ್ರಶೇಖರ್ ತಾನೇ ವಿಷ ಸೇವಿಸಿದ್ದಾನೆ.
ಇನ್ನೊಂದೆಡೆ, ಭವಾನಿಗೆ ಆಕೆಯ ಮನೆಯವರು ಹಲವು ಬಾರಿ ಕರೆ ಮಾಡಿದ್ದರೂ ಫೋನ್ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಮನೆ ಮಾಲೀಕರು ಕೊಠಡಿಯ ಬಳಿ ಹೋಗಿ ಪರಿಶೀಲಿಸಿದಾಗ ಒಳಗಿನಿಂದ ಚಂದ್ರಶೇಖರ್ ನರಳುತ್ತಿರುವುದು ಕಂಡುಬಂದಿದೆ.
ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಭವಾನಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದು, ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಬಸ್‌ಗೆ ಬೈಕ್ ಡಿಕ್ಕಿ – ಓರ್ವ ಸ್ಥಳದಲ್ಲೇ ಸಾವು.. ಮತ್ತೋರ್ವನಿಗೆ ಗಾಯ!


















