ಬೆಂಗಳೂರು : ದೇಶದ ಬ್ಯಾಂಕ್‌ಗಳು ಗ್ರಾಹಕರಿಗೆ ಹಲವು ರೀತಿಯ ಶುಲ್ಕಗಳನ್ನು ವಿಧಿಸುತ್ತವೆ. ಖಾತೆ ನಿರ್ವಹಣೆ ಶುಲ್ಕ, ಎಸ್ಎಂಎಸ್ ಕಳಿಸುವುದಕ್ಕೂ ಶುಲ್ಕ, ಎಟಿಎಂ ಕಾರ್ಡ್ ಪಡೆಯುವುದಕ್ಕೂ ಶುಲ್ಕ ವಿಧಿಸುತ್ತವೆ. ಇದನ್ನು ಮನಗಂಡ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಗ್ರಾಹಕರಿಗೆ ವಿಧಿಸುವ ಎಸ್ಎಂಎಸ್ ಶುಲ್ಕವನ್ನು ರದ್ದುಗೊಳಿಸಿದೆ. ಇದರಿಂದ ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಶುಲ್ಕ ಉಳಿಯಲಿದೆ.
ಜೂನ್ 24 ರಂದು ಆರ್ ಬಿಐ ಹೊರಡಿಸಿದ ಹೊಸ ನಿಯಮದಂತೆ, ಬ್ಯಾಂಕ್ ಗಳು ನಿಯಮಗಳ ಅನುಸರಣೆ, ನಿಯಂತ್ರಣಗಳ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು, ಪ್ರಚಾರ ಮಾಡುವುದು ಸೇರಿ ವಿವಿಧ ಸಂದೇಶಗಳಿಗಾಗಿ ಗ್ರಾಹಕರಿಂದ ಹಣವನ್ನು ವಸೂಲಿ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.ಈ ಹಿಂದೆ ಬ್ಯಾಂಕ್ ಗಳು ಇಂತಹ ಎಸ್ಎಂಎಸ್ ಸೇವೆಗಾಗಿ ಪ್ರತಿ ತ್ರೈಮಾಸಿಕಕ್ಕೆ ಸುಮಾರು 15 ರಿಂದ 18 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದವು.
ಆರ್ ಬಿಐ ಬ್ಯಾಂಕ್ ಗಳಿಗೆ ಒಂದು ಆಯ್ಕೆಯನ್ನು ನೀಡಿದೆ. 500 ರೂ.ಗಿಂತ ಕಡಿಮೆ ಮೊತ್ತದ ವಹಿವಾಟುಗಳಿಗೆ ಕಡ್ಡಾಯವಾಗಿ ಎಸ್ಎಂಎಸ್ ಕಳುಹಿಸಬೇಕೆಂಬ ನಿಯಮವನ್ನು ಸಡಿಲಗೊಳಿಸಲಾಗಿದೆ. ಅಂದರೆ, ಬ್ಯಾಂಕ್ ಗಳು ಇಂತಹ ಸಣ್ಣ ವಹಿವಾಟುಗಳಿಗೆ ಎಸ್ಎಂಎಸ್ ಕಳುಹಿಸುವುದನ್ನು ನಿಲ್ಲಿಸಬಹುದು ಅಥವಾ ಪರ್ಯಾಯವಾಗಿ ಪುಶ್ ನೋಟಿಫಿಕೇಶನ್ ಗಳು ಅಥವಾ ವಾಟ್ಸ್ ಆ್ಯಪ್ ಮೂಲಕ ಮಾಹಿತಿ ನೀಡಬಹುದು.
ಈ ಕ್ರಮದಿಂದ ಬ್ಯಾಂಕ್ಗಳ ಶುಲ್ಕ ರೂಪದ ಆದಾಯದಲ್ಲಿ ವಾರ್ಷಿಕವಾಗಿ ಸುಮಾರು 300 ಕೋಟಿ ರೂಪಾಯಿಯಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಎಚ್ ಡಿ ಎಫ್ ಸಿ ಮತ್ತು ಐಸಿಐಸಿಐನಂತಹ ದೊಡ್ಡ ಖಾಸಗಿ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಣ್ಣ ವಹಿವಾಟುಗಳಿಗೂ ಎಸ್ಎಂಎಸ್ ಕಳುಹಿಸುವುದನ್ನು ಮುಂದುವರಿಸುವ ಸಾಧ್ಯತೆಯಿದೆ.
ಈಗ ಬ್ಯಾಂಕ್ ಗಳು ನೇರವಾಗಿ ಎಸ್ಎಂಎಸ್ ಶುಲ್ಕವನ್ನು ವಿಧಿಸಲು ಅವಕಾಶವಿಲ್ಲದ ಕಾರಣ, ಬ್ಯಾಂಕ್ ಗಳು ಈ ವೆಚ್ಚವನ್ನು ಸರಿದೂಗಿಸಲು ಅಕೌಂಟ್ ಮೇಂಟೆನೆನ್ಸ್ ಚಾರ್ಜ್ ಅಥವಾ ಇತರ ವಹಿವಾಟು ಶುಲ್ಕಗಳ ರೂಪದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ವಜಾಗೊಂಡ ಬಳಿಕ ಮೌನ ಮುರಿದ ಮೆಕಲಮ್



















