ಗುರುಗ್ರಾಮ : ಭಾವಿ ಪತ್ನಿಯನ್ನು ಭೇಟಿಯಾಗುವ ಉತ್ಸಾಹದಲ್ಲಿದ್ದ ಯುವಕನೊಬ್ಬ, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಯನ್ನು ಮಿತಿಮೀರಿ (ಓವರ್‌ಡೋಸ್) ಸೇವಿಸಿ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು 29 ವರ್ಷದ ರೋಹಿತ್ ಲಾಲ್ ಎಂದು ಗುರುತಿಸಲಾಗಿದೆ. ಮೂಲತಃ ನಾಗ್ಪುರದವನಾಗಿದ್ದ ಈತ, ನವದೆಹಲಿಯ ‘ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ದಲ್ಲಿ ಕೆಲಸ ಮಾಡುತ್ತಿದ್ದ. ಗುರುಗ್ರಾಮದ ಸೆಕ್ಟರ್ 53ರ ಪಿಜಿ (ಪೇಯಿಂಗ್ ಗೆಸ್ಟ್) ಕೊಠಡಿಯೊಂದರಲ್ಲಿ ವಾಸವಿದ್ದ. ಗುರುವಾರ ಬೆಳಿಗ್ಗೆ ರೋಹಿತ್‌ನ ಸಹೋದ್ಯೋಗಿಯೊಬ್ಬರು ಆತನನ್ನು ಕಚೇರಿಗೆ ಕರೆದೊಯ್ಯಲು ಬಂದಾಗ ಈ ದುರಂತ ಘಟನೆ ಬೆಳಕಿಗೆ ಬಂದಿದೆ.
ಪ್ರತಿದಿನ ಒಟ್ಟಿಗೆ ಕಚೇರಿಗೆ ಹೋಗುತ್ತಿದ್ದ ಸಹೋದ್ಯೋಗಿ, ಅಂದು ಬೆಳಿಗ್ಗೆ ರೋಹಿತ್‌ಗೆ ಹಲವು ಬಾರಿ ಕರೆ ಮಾಡಿದರೂ ಆತ ಸ್ವೀಕರಿಸಿರಲಿಲ್ಲ. ಕೊಠಡಿಯ ಬಾಗಿಲು ಕೂಡ ತೆರೆಯದಿದ್ದಾಗ ಅನುಮಾನಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಔಷಧಿಗಳ ಕವರ್ ಪತ್ತೆ, ಹೃದಯಾಘಾತದ ಶಂಕೆ
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕೊಠಡಿಯ ಬಾಗಿಲು ಒಡೆದು ಒಳನುಗ್ಗಿದಾಗ ರೋಹಿತ್ ಹಾಸಿಗೆಯ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ಕೊಠಡಿಯನ್ನು ಪರಿಶೀಲಿಸಿದಾಗ ಕೆಲವು ಔಷಧಿಗಳು ಹಾಗೂ ಆರೋಗ್ಯ ವರ್ಧಕಗಳ (ಹೆಲ್ತ್ ಸಪ್ಲಿಮೆಂಟ್ಸ್) ಖಾಲಿ ಕವರ್‌ಗಳು ಪೊಲೀಸರಿಗೆ ಸಿಕ್ಕಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ರೋಹಿತ್ ತನ್ನ ಭಾವೀ ಪತ್ನಿಯನ್ನು ಭೇಟಿಯಾಗಲು ಕೊಠಡಿಗೆ ಆಹ್ವಾನಿಸಿದ್ದ. ಆಕೆ ಬರುವ ಮುನ್ನ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಯನ್ನು ಸೇವಿಸಿದ್ದಾನೆ. ಆದರೆ ಮಾತ್ರೆಯ ಡೋಸ್ ಹೆಚ್ಚಾದ ಕಾರಣ ಆತನಿಗೆ ತೀವ್ರ ಹೃದಯಾಘಾತ ಸಂಭವಿಸಿ, ಯುವತಿ ಬರುವ ಮುನ್ನವೇ ಪ್ರಾಣ ಬಿಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಮೃತದೇಹದ ಒಳಾಂಗಗಳ ಮಾದರಿ (ವಿಸೆರಾ) ಹಾಗೂ ಕೊಠಡಿಯಲ್ಲಿ ಸಿಕ್ಕ ಔಷಧಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಪರೀಕ್ಷೆಗಾಗಿ ಕಳುಹಿಸಲಾಗಿದೆ. “ವಿಸೆರಾ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಏನೆಂಬುದು ಅಧಿಕೃತವಾಗಿ ಬಹಿರಂಗವಾಗಲಿದೆ. ಸದ್ಯ ನಾವು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ಮುಂದುವರಿಸಿದ್ದೇವೆ” ಎಂದು ಸೆಕ್ಟರ್ 53ರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸತ್ಯೇಂದರ್ ರಾವಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಕಿಲ್ಲರ್ BMTCಗೆ ಮತ್ತೊಂದು ಬಲಿ ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಹರಿದ ಬಸ್!



















