ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂಥ ಭೀಕರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಎರಗಿದ ನಾಲ್ವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊನೆಗೆ ಗಂಟಲಿಗೆ ಚಾಕು ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅಷ್ಟಕ್ಕೇ ಮುಗಿಸದೆ, ಬಾಲಕಿಯ ಮೃತದೇಹವನ್ನು ಕಾಡಿನಂತಹ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಹೋಗಿದ್ದಾರೆ. ಶವವನ್ನು ಬೀದಿನಾಯಿಗಳು ಹರಿದು ತಿಂದಿದ್ದು, ದೇಹದ ಅಂಗಾಂಗಗಳು ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.
ತಡವಾಗಿ ಪ್ರಕರಣ ಬೆಳಕಿಗೆ
ವಾಯುವ್ಯ ದೆಹಲಿಯ ಸ್ವರೂಪ್ ನಗರ ಪ್ರದೇಶದ ಕುಶಕ್ ರಸ್ತೆಯ ಬಳಿ ಇರುವ ಜೈಪಾಲ್ ರಾಣಾ ಎಂಬುವರ ಹೊಲದ ಸಮೀಪ ಸೆಪ್ಟೆಂಬರ್ 13 ರಂದು ಕೊಳೆತ ಮೃತದೇಹ ಪತ್ತೆಯಾಗಿದೆ. ಶವವು ಎಷ್ಟರ ಮಟ್ಟಿಗೆ ಕೊಳೆತು ಹೋಗಿತ್ತೆಂದರೆ, ಆರಂಭದಲ್ಲಿ ಅದು ಹೆಣ್ಣೋ, ಗಂಡೋ ಎಂದು ಗುರುತಿಸಲೂ ಪೋಲಿಸರಿಗೇ ಸಾಧ್ಯವಾಗಿರಲಿಲ್ಲ. ಬೀದಿನಾಯಿಗಳು ಶವದ ಭಾಗಗಳನ್ನು ತಿಂದು ಚಿಂದಿ ಮಾಡಿದ್ದರಿಂದ ಬಾಲಕಿಯ ಒಂದು ಕೈ ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಬಾಲಕಿ ಆಗಾಗ್ಗೆ ಮನೆಯಿಂದ ತೆರಳಿ ಕೆಲವು ದಿನಗಳ ನಂತರ ಹಿಂತಿರುಗುತ್ತಿದ್ದ ಕಾರಣ, ಆಕೆಯ ಪೋಷಕರು ಯಾವುದೇ ನಾಪತ್ತೆ ದೂರು ಕೂಡ ದಾಖಲಿಸಿರಲಿಲ್ಲ.
ಟೆಂಪೋದಲ್ಲಿ ನಡೆದ ಪೈಶಾಚಿಕ ಕೃತ್ಯ
ಪೊಲೀಸ್ ತನಿಖೆಯ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿಗಳು ಪರಸ್ಪರ ಪರಿಚಿತರಾಗಿದ್ದರು. ಕೃತ್ಯ ನಡೆದ ದಿನದಂದು ಬಾಲಕಿ ಆರೋಪಿಗಳೊಂದಿಗೆ ಟೆಂಪೋ ಒಂದರಲ್ಲಿ ಪ್ರಯಾಣಿಸುತ್ತಿದ್ದಳು. ವಾಹನದ ಒಳಗಡೆಯೇ ಎಲ್ಲರೂ ಮದ್ಯಪಾನ ಮಾಡಿದ್ದು, ನಂತರ ಆರೋಪಿಗಳು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆ ಬಳಿಕ ಆಕೆಯನ್ನು ಕೊಲೆ ಮಾಡಿ ಶವವನ್ನು ಬಯಲು ಜಾಗದಲ್ಲಿ ಎಸೆದು ಪರಾರಿಯಾಗಿದ್ದಾರೆ.

ಸಿಸಿಟಿವಿ ಜಾಡು ಹಿಡಿದು ಆರೋಪಿಗಳ ಬಂಧನ
ಘಟನಾ ಸ್ಥಳದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಇಲ್ಲದಿದ್ದರಿಂದ ದೆಹಲಿ ಪೊಲೀಸರು ಸುತ್ತಮುತ್ತಲಿನ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿದ್ದಾರೆ. ಈ ವೇಳೆ ಕತ್ತಲಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಟೆಂಪೋ ಒಂದರ ಸುಳಿವು ಸಿಕ್ಕಿದೆ. ಸೆಪ್ಟೆಂಬರ್ 15 ಮತ್ತು 16ರ ರಾತ್ರಿ ನಡೆಸಿದ ಸುದೀರ್ಘ ಕಾರ್ಯಾಚರಣೆಯಲ್ಲಿ ಪೊಲೀಸರು ಟೆಂಪೋವನ್ನು ಪತ್ತೆಹಚ್ಚಿ, ಅದರ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕುಕೃತ್ಯ ಬಯಲಾಗಿದೆ.
ಮೂವರು ಅಪ್ರಾಪ್ತರು ಸೇರಿ ನಾಲ್ವರ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವಯಸ್ಕ ಹಾಗೂ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಖಡ್ಡಾ ಕಾಲೋನಿ ನಿವಾಸಿ ಶಿವಂ ಅಲಿಯಾಸ್ ಸುದಾಮಾ ಅಲಿಯಾಸ್ ಚುಚು ಎಂಬಾತ ಬಂಧಿತ ಮುಖ್ಯ ಆರೋಪಿಯಾಗಿದ್ದು, ಉಳಿದ ಮೂವರು 16 ಮತ್ತು 17 ವರ್ಷದ ಅಪ್ರಾಪ್ತ ಬಾಲಕರಾಗಿದ್ದಾರೆ. ಕೊಲೆಗೆ ಬಳಸಲಾದ ಎರಡು ಚಾಕುಗಳು, ಕೃತ್ಯದ ವೇಳೆ ಆರೋಪಿಗಳು ಧರಿಸಿದ್ದ ರಕ್ತಸಿಕ್ತ ಬಟ್ಟೆಗಳು ಮತ್ತು ಟೆಂಪೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್‌ಎಸ್ ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : 30 ಎಸೆತಗಳಲ್ಲಿ ಶತಕ : ಯುವರಾಜ್ ಸಿಂಗ್ ಸಲಹೆ ಪಾಲಿಸಿ ಅಭಿಷೇಕ್ ಶರ್ಮಾ ದಾಖಲೆ!



















