ಬೆಂಗಳೂರು : ನಗರದ ಖಾಸಗಿ ಬಾಕ್ಸಿಂಗ್ ಕ್ಲಬ್‌ನ ಕೋಚ್ ವಿರುದ್ಧ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿ ಕಳೆದ ಕೆಲವು ತಿಂಗಳಿಂದ ಬಾಕ್ಸಿಂಗ್ ಕ್ಲಬ್‌ನಲ್ಲಿ ಕೋಚಿಂಗ್ ಪಡೆಯುತ್ತಿದ್ದು, ಇದೇ ವೇಳೆ ಕೋಚ್ ನಿರಂತರವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
50 ವರ್ಷದ ಕೋಚ್ ರಾಮಚಂದ್ರ ವಿದ್ಯಾರ್ಥಿನಿಗೆ ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೋಚಿಂಗ್ ವೇಳೆ ಅನಗತ್ಯವಾಗಿ ಸ್ಪರ್ಶಿಸುವುದು, ಖಾಸಗಿ ಮಾತುಕತೆ ಹೆಸರಿನಲ್ಲಿ ಒತ್ತಾಯಿಸುವುದು ಸೇರಿದಂತೆ ಹಲವು ರೀತಿಯ ಅಸಭ್ಯ ವರ್ತನೆ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ವಾರದ ಹಿಂದೆ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿನಿ ಹೊರರಾಜ್ಯಕ್ಕೆ ತೆರಳಿದ್ದ ವೇಳೆ ಕೂಡ ಕೋಚ್ ರಾಮಚಂದ್ರ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಸ್ಪರ್ಧೆಯ ನೆಪದಲ್ಲಿ ವಿದ್ಯಾರ್ಥಿನಿಯನ್ನು ತನ್ನ ರೂಮ್‌ಗೆ ಕರೆಸಿಕೊಂಡು ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಹೊರರಾಜ್ಯ ಪ್ರವಾಸದ ವೇಳೆ ಖಾಸಗಿ ಕೋಣೆಯಲ್ಲಿ ಬಾಲಕಿಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತನೆ ನಡೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಘಟನೆಗಳಿಂದ ವಿದ್ಯಾರ್ಥಿನಿ ಮಾನಸಿಕವಾಗಿ ಕುಗ್ಗಿಹೋಗಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಜೀವಂತ ಬಿಡುವುದಿಲ್ಲ ಎಂದು ಕೋಚ್ ಬೆದರಿಕೆ ಹಾಕಿದ್ದಾನೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಭಯದಿಂದ ವಿದ್ಯಾರ್ಥಿನಿ ಹಲವು ದಿನಗಳ ಕಾಲ ವಿಷಯವನ್ನು ಮುಚ್ಚಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಕೊನೆಗೆ ತನ್ನ ಪೋಷಕರಿಗೆ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ವಿದ್ಯಾರ್ಥಿನಿಯ ಪೋಷಕರು ಕೋಚ್ ರಾಮಚಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿನಿಯ ಪೋಷಕರ ದೂರಿನ ಆಧಾರದ ಮೇಲೆ ರಾಮಚಂದ್ರ ವಿರುದ್ಧ SR ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಲಾರಿ-ಕ್ರೂಸರ್ ಮಧ್ಯೆ ಭೀಕರ ಅಪಘಾತ ; ಐವರು ದುರ್ಮರಣ



















