ಬೆಂಗಳೂರು : ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿಯನ್ನ ಪ್ರಿಯಕರನೇ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 20 ವರ್ಷದ ಅನುಷಾ ಮೃತ ಯುವತಿ.
ಮೃತ ಅನುಷಾ ಮತ್ತು ಆರೋಪಿ ಶರತ್ ಇಬ್ಬರೂ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವರಾಗಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿದ್ದು, ಬಳಿಕ ಆತ್ಮೀಯತೆ ಬೆಳೆದು ಲಿವ್-ಇನ್ ಸಂಬಂಧದಲ್ಲಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಶರತ್ ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಕಳೆದ ಸುಮಾರು ಆರು ತಿಂಗಳಿಂದ ಇಬ್ಬರೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶನಿವಾರ ರಾತ್ರಿ ಇಬ್ಬರ ನಡುವೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಜಗಳ ನಡೆದಿದೆ. ಜಗಳದ ವೇಳೆ ಶರತ್ ಅನುಷಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಬಳಿಕ ಶರತ್ ಸೋಮವಾರ ವಕೀಲರೊಬ್ಬರಿಗೆ ನಡೆದ ವಿಚಾರವನ್ನು ತಿಳಿಸಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಕೀಲರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿ ಶರತ್‌ನನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕ್ರಿಯೆಗಳ ನಂತರ ಅನುಷಾ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ನಡುವೆ ಆರೋಪಿ ಶರತ್‌ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಜಿಮ್ ಮುಗಿಸಿ ಬಂದ ಬಾಡಿ ಬಿಲ್ಡರ್‌ಗೆ ಹೃದಯಾಘಾತ – ಮನೆ ಎದುರೇ ಕುಸಿದು ಬಿದ್ದು ಸಾವು!


















