ಚೆನ್ನೈ : ತಮಿಳು ಹೊಸ ವರ್ಷ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ 150ನೇ ಜನ್ಮದಿನದ ಶುಭ ಸಂದರ್ಭದಲ್ಲೇ ಬಿಜೆಪಿಯು ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ತನ್ನ ಮಹತ್ವಾಕಾಂಕ್ಷೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಪ್ರಣಾಳಿಕೆಯನ್ನು ಇಂದು ಅನಾವರಣಗೊಳಿಸಿದ್ದು, ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವುದರ ಜೊತೆಗೆ ಮತದಾರರನ್ನು ಸೆಳೆಯಲು ಹತ್ತಾರು “ಗ್ಯಾರಂಟಿ”ಗಳನ್ನು ಘೋಷಿಸಿದ್ದಾರೆ.
ಬಿಜೆಪಿಯ ಪ್ರಣಾಳಿಕೆಯಲ್ಲಿ ಮಹಿಳಾ ಮತದಾರರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 2,000 ರೂಪಾಯಿ ಆರ್ಥಿಕ ನೆರವು, ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಇ-ಸ್ಕೂಟರ್ ಖರೀದಿಸಲು ಅರ್ಹ ಮಹಿಳೆಯರಿಗೆ 25,000 ರೂಪಾಯಿ ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದೆ. ಇದಲ್ಲದೆ, ಮೊದಲ ಬಾರಿಗೆ ಮನೆ ಖರೀದಿಸುವ ಮಹಿಳೆಯರಿಗೆ ಮುದ್ರಾಂಕ ಶುಲ್ಕದಲ್ಲಿ ಶೇ.3ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆ. ಜೀವನ ವೆಚ್ಚ ಮತ್ತು ತೆರಿಗೆ ಏರಿಕೆಯ ಹೊರೆ ತಗ್ಗಿಸಲು ಪ್ರತಿ ಕುಟುಂಬಕ್ಕೆ ಒಂದು ಬಾರಿಯ ನೆರವಾಗಿ 10,000 ರೂ. ಪಾವತಿಸುವ ವಿಶಿಷ್ಟ ಭರವಸೆಯನ್ನೂ ಪಕ್ಷ ನೀಡಿದೆ.
ತಮಿಳುನಾಡಿನ ಸಾಂಸ್ಕೃತಿಕ ಹೆಗ್ಗುರುತಾದ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ಸೂಚಿಸಿರುವ ಬಿಜೆಪಿ, ಜಲ್ಲಿಕಟ್ಟು ಹೋರಿಗಳನ್ನು ಸಾಕುವವರಿಗೆ ಮಾಸಿಕ 2,000 ರೂ. ಸಹಾಯಧನ ಮತ್ತು ಆಕಸ್ಮಿಕ ಸಾವು ಸಂಭವಿಸಿದಲ್ಲಿ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ದೇವಸ್ಥಾನಗಳ ವಿಚಾರದಲ್ಲೂ ಪ್ರಮುಖ ಬದಲಾವಣೆಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದ್ದು, ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸ್ಥಳೀಯ ನಿವಾಸಿಗಳಿಗಾಗಿಯೇ ಪ್ರತಿದಿನ ಎರಡು ಗಂಟೆಗಳ ವಿಶೇಷ ದರ್ಶನ ಅವಧಿಯನ್ನು ಮೀಸಲಿಡುವುದಾಗಿ ಪಕ್ಷ ಹೇಳಿದೆ. ಕಾರ್ತಿಕ ದೀಪಂ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳಿಗೆ ನಿರಂತರ ಬೆಂಬಲ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.
ಭ್ರಷ್ಟಾಚಾರದ ವಿರುದ್ಧ ಸಮರ
ಪ್ರಣಾಳಿಕೆ ಬಿಡುಗಡೆ ವೇಳೆ ಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರಿದ ಜೆ.ಪಿ. ನಡ್ಡಾ, ತಮಿಳುನಾಡಿನಲ್ಲಿ ಡ್ರಗ್ಸ್ ಮಾಫಿಯಾ ಶೇ.51ರಷ್ಟು ಏರಿಕೆಯಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ ಎಂದು ದೂರಿದ ಅವರು, ಇದನ್ನು ತಡೆಯಲು ‘ಝೀರೋ ಎಫ್‌ಐಆರ್’ ಜಾರಿ, ಗಂಭೀರ ಅಪರಾಧಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ ಮತ್ತು ಭದ್ರತೆಗಾಗಿ ಬಸ್‌ಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ 100 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ತಮಿಳುನಾಡು ವಿಶ್ವದ ಅತ್ಯಂತ ಹಳೆಯ ನಾಗರಿಕತೆಯ ತೊಟ್ಟಿಲು ಎಂದು ಬಣ್ಣಿಸಿದ ನಡ್ಡಾ, ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ‘ಲವ್ ಮಾಕ್ಟೇಲ್-3’ 25ನೇ ದಿನ ಬ್ಯಾಷ್..!


















