ನವದೆಹಲಿ : ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಗಾರ ಸೋನಮ್ ವಾಂಗ್ಚುಕ್ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವ ದಿನಾಂಕವನ್ನು ಘೋಷಿಸಿದ್ದಾರೆ.
ಜುಲೈ 20ರಂದು ಸಂಸತ್ ಭವನಕ್ಕೆ ಹಮ್ಮಿಕೊಳ್ಳಲಾಗಿರುವ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ತಮ್ಮ ಉಪವಾಸವನ್ನು ಕೊನೆಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ, ಮೆರವಣಿಗೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳದಿದ್ದರೆ ತಾವು “ದೆವ್ವವಾಗಿ ಮರಳಿ ಬರುವುದಾಗಿ” ಮಾರ್ಮಿಕವಾಗಿ ಎಚ್ಚರಿಸಿದ್ದಾರೆ.
ಸಂಸತ್ ಚಲೋ ಯಶಸ್ಸಿಗೆ ಕರೆ
ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಜಂತರ್ ಮಂತರ್ ಪ್ರತಿಭಟನೆ 28ನೇ ದಿನಕ್ಕೆ ಕಾಲಿಟ್ಟಿದ್ದು, ಜುಲೈ 20 ರಂದು ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು ಬೃಹತ್ “ಸಂಸತ್ ಚಲೋ” ಮೆರವಣಿಗೆಯನ್ನು ಆಯೋಜಿಸಲಾಗಿದೆ.
ಈ ಕುರಿತು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಂಗ್ಚುಕ್, ಜುಲೈ 20 ರಂದು ನಿಮ್ಮೊಂದಿಗೆ ಸಂಸತ್ತಿನ ಕಡೆಗೆ ಹೆಜ್ಜೆ ಹಾಕಲು ನಾನು ಹೇಗಾದರೂ ಬದುಕಿರುತ್ತೇನೆ. ಆದರೆ ನಮ್ಮ ಈ ಶಾಂತಿಯುತ ಮೆರವಣಿಗೆ ಅಂದು ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಹಿಂತಿರುಗುತ್ತೇನೆ ಎಂದು ಹಾಸ್ಯ ಚಟಾಕಿಯೊಂದಿಗೆ ಗಂಭೀರ ಸಂದೇಶ ರವಾನಿಸಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಸಹಾನುಭೂತಿ ತೋರಿಸುವುದಕ್ಕಿಂತ ಹೆಚ್ಚಾಗಿ, ಜುಲೈ 20ರ ಸಂಸತ್ ಚಲೋದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ದೇಗುಲಕ್ಕೆ ನಮ್ಮ ಧ್ವನಿ ತಲುಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕ್ಷೀಣಿಸುತ್ತಿರುವ ಆರೋಗ್ಯ ಸ್ಥಿತಿ
ಮೂರನೇ ವಾರಕ್ಕೆ ಕಾಲಿಟ್ಟಿರುವ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವೈದ್ಯಕೀಯ ವರದಿಗಳ ಪ್ರಕಾರ, ಉಪವಾಸ ಆರಂಭಿಸಿದ ದಿನದಿಂದ ಇದುವರೆಗೆ ಅವರು 9 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದು, ಸದ್ಯ ಅವರ ತೂಕ 56.65 ಕೆಜಿಗೆ ಕುಸಿದಿದೆ. ಅವರ ರಕ್ತದೊತ್ತಡ 105/61 mmHg ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ 80 mg/dL ನಷ್ಟಿದೆ. ಅವರು ಪ್ರಸ್ತುತ ಪ್ರಜ್ಞಾವಸ್ಥೆಯಲ್ಲಿದ್ದರೂ ವೈದ್ಯರ ನಿರಂತರ ನಿಗಾ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸಹ ಮಧ್ಯಪ್ರವೇಶಿಸಿದ್ದು, ವಾಂಗ್ಚುಕ್ ಅವರ ಆರೋಗ್ಯದ ಮೇಲೆ ದಿನನಿತ್ಯ ನಿಗಾ ಇಡಲು ಮತ್ತು ಅಗತ್ಯಬಿದ್ದರೆ ವೈದ್ಯಕೀಯ ನೆರವು ನೀಡಲು ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ಆದೇಶಿಸಿದೆ.
ಉಪವಾಸದಿಂದ ಬದಲಾದ ಹೋರಾಟದ ಹಾದಿ
ನಿರುದ್ಯೋಗಿ ಯುವಕರನ್ನು “ಜಿರಳೆಗಳು” ಮತ್ತು “ಪರಾವಲಂಬಿಗಳು” ಎಂದು ಕರೆದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯನ್ನು ಖಂಡಿಸಿ ವಿದ್ಯಾರ್ಥಿಗಳು ಆರಂಭಿಸಿದ್ದ ಒಂದು ಸಾಂಕೇತಿಕ ಹಾಗೂ ವ್ಯಂಗ್ಯಾತ್ಮಕ ಪ್ರತಿಭಟನೆಯಾಗಿದ್ದ ಸಿಜೆಪಿ (CJP) ಚಳವಳಿಗೆ ಸೋನಮ್ ವಾಂಗ್ಚುಕ್ ಅವರ ಪ್ರವೇಶ ಹೊಸ ಆಯಾಮವನ್ನು ನೀಡಿದೆ. ಅವರ ಉಪವಾಸ ಸತ್ಯಾಗ್ರಹವು ಈ ಆನ್‌ಲೈನ್ ಅಭಿಯಾನವನ್ನು ನೈತಿಕ ಮತ್ತು ಬಲವಾದ ಜನಾಂದೋಲನವನ್ನಾಗಿ ಪರಿವರ್ತಿಸಿಜದೆ. ಇವರ ಹೋರಾಟಕ್ಕೆ ಬೆಂಬಲ ಸೂಚಿಸಿ ಹಲವು ರಾಜಕೀಯ ಮುಖಂಡರು, ಸಾಹಿತಿಗಳು, ನಟರು ಮತ್ತು ನಾಗರಿಕ ಸಮಾಜದ ಗಣ್ಯರು ಜಂತರ್ ಮಂತರ್‌ಗೆ ಭೇಟಿ ನೀಡುತ್ತಿದ್ದಾರೆ.
ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದೆ ಉಪವಾಸ ಕೈಬಿಟ್ಟರೆ ಹೋರಾಟದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ವಾಂಗ್ಚುಕ್ ಅವರ ಅಭಿಪ್ರಾಯವಾಗಿದೆ. ಹೀಗಾಗಿ ಜುಲೈ 20ರಂದು ನಡೆಯುವ ಸಂಸತ್ ಮೆರವಣಿಗೆಯ ಜನಬೆಂಬಲ ಮತ್ತು ಯಶಸ್ಸೇ ಈ ಇಡೀ ಸತ್ಯಾಗ್ರಹದ ಭವಿಷ್ಯವನ್ನು ನಿರ್ಧರಿಸಲಿದೆ.
ಇದನ್ನೂ ಓದಿ : “ಕೃಷ್ಣ ಮುಸ್ಲಿಂ, ನಮಾಜ್ ಕೂಡ ಮಾಡುತ್ತಿದ್ದ” : ಮೌಲ್ವಿ ವಿವಾದಾತ್ಮಕ ಹೇಳಿಕೆ.. FIR ದಾಖಲು!



















