ಬೆಂಗಳೂರು : ನೆಲಮಂಗಲದ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್‌ಗೆ ತೆರಳಿದ್ದ ಉದ್ಯಮಿಯ ಪುತ್ರನೊಬ್ಬ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 31 ವರ್ಷದ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿರುವ ಯುವಕ. ನಿನ್ನೆ ಬೆಳಗ್ಗೆ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್‌ಗೆ ತೆರಳಿದ್ದ ಅದ್ವೈತ್, ಬಳಿಕ ಮನೆಗೆ ವಾಪಸ್ ಆಗಿಲ್ಲ ಎನ್ನಲಾಗಿದೆ.
ಅದ್ವೈತ್ ಉಪಾಧ್ಯಾಯ ಬಾಡಿಗೆಗೆ ರಾಯಲ್ ಎನ್‌ಫೀಲ್ಡ್ ಬೈಕ್ ಪಡೆದುಕೊಂಡು ಶಿವಗಂಗೆಗೆ ಬಂದಿದ್ದರು. ಬೆಟ್ಟದ ಕೆಳಭಾಗದಲ್ಲಿ ಬೈಕ್‌ನ್ನು ಪಾರ್ಕ್ ಮಾಡಿ ಬಳಿಕ ಬೆಟ್ಟ ಹತ್ತಲು ತೆರಳಿದ್ದರು. ಆದರೆ ಬೆಟ್ಟ ಹತ್ತಿದ ನಂತರ ಅವರು ವಾಪಸ್ ಬಂದಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಯುವಕನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಯುವಕ ನಾಪತ್ತೆಯಾಗಿರುವ ಹಿನ್ನೆಲೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬೆಟ್ಟದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಅದ್ವೈತ್ ಯಾವ ಮಾರ್ಗದಲ್ಲಿ ತೆರಳಿದ್ದರು ಹಾಗೂ ಬಳಿಕ ಎಲ್ಲಿಗೆ ಹೋಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.
ಪೊಲೀಸರು ಶಿವಗಂಗೆ ಬೆಟ್ಟದ ಮೇಲೆ ಡ್ರೋನ್ ಕ್ಯಾಮೆರಾ ಹಾರಿಸಿ ಶೋಧ ನಡೆಸುತ್ತಿದ್ದಾರೆ. ಬೆಟ್ಟದ ಕಠಿಣ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನೂ ಪರಿಶೀಲಿಸಲಾಗುತ್ತಿದೆ. ನಾಪತ್ತೆಯಾಗಿರುವ ಯುವಕನ ಪತ್ತೆಗೆ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಡ್ರೆಸ್ಸಿಂಗ್ ರೂಮ್‌ನಲ್ಲಿ ಜಡೇಜಾ-ಗಂಭೀರ್ ಹಾಸ್ಯಮಯ ಕ್ಷಣ.. ವಿಡಿಯೋ ವೈರಲ್!


















