ಬೆಳಗಾವಿ: ಪತ್ನಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಮಂಚದೊಳಗೆ ಬಚ್ಚಿಟ್ಟು, ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಪತಿ ಪರಾರಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಸಾಕ್ಷಿ ಕಂಬಾರ(20) ಕೊಲೆಯಾದ ಪತ್ನಿ. ಆಕಾಶ್ ಎಂಬಾತ ಕೊಲೆ ಮಾಡಿದ ಪತಿ.
ನಾಲ್ಕು ತಿಂಗಳ ಹಿಂದೆಯಷ್ಟೇ ಆಕಾಶ್ ಮತ್ತು ಸಾಕ್ಷಿಯ ಮದುವೆ ಆಗಿತ್ತು. ಮೂರು ದಿನದ ಹಿಂದೆ ಸಾಕ್ಷಿ ಕಂಬಾರಳನ್ನು ಹತ್ಯೆ ಮಾಡಿ, ಪತಿ ಆಕಾಶ್ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ಊರಿಗೆ ಹೋಗಿದ್ದ ಸಾಕ್ಷಿಯ ಅತ್ತೆ, ಮನೆಗೆ ಹಿಂದಿರುಗಿ ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಮತ್ತು ಗೋಕಾಕ್ ಡಿವೈಎಸ್ಪಿ ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.
ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವರೆಗೆ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.



















