ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿವಗುಂಡಿ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಯಲ್ಲೇ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ 58 ಗ್ರಾಂ ಚಿನ್ನಾಭರಣ ಹಾಗೂ ₹48 ಸಾವಿರ ನಗದು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಖತರ್ನಾಕ್ ಕಳ್ಳ ಚಿವಗುಂಡಿ ಗ್ರಾಮದ ಮಹಾಂತೇಶ ಬಸಪ್ಪ ಬೋಗೂರ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಯೊಳಗೆ ನುಗ್ಗಿ 58 ಗ್ರಾಂ ಆಭರಣ ಹಾಗೂ 48 ಸಾವಿರ ನಗದನ್ನು ಕಳವು ಮಾಡಿ ಪರಾರಿಯಾಗಿದ್ದ.
ಘಟನಾ ಸಂಬಂಧ ಮಹಾಂತೇಶ ಬಸಪ್ಪ ಬೋಗೂರ ಅವರು ನೀಡಿದ ದೂರಿನ ಮೇರೆಗೆ ಬೈಲಹೊಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ತನಿಖೆ ಆರಂಭಿಸಿದ್ದರು. ವಿವಿಧ ಸುಳಿವುಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇವಲ 24 ಗಂಟೆಯಲ್ಲೇ ಪ್ರಕರಣವನ್ನು ಭೇದಿಸಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿವಗುಂಡಿ ಗ್ರಾಮದ ಪ್ರಕಾಶ ರಾಯಪ್ಪ ಮಲ್ಲೂರ (40) ಬಂಧಿತ ಆರೋಪಿಯಾಗಿದ್ದು, ಆತನಿಂದ ಸುಮಾರು 5.49 ಲಕ್ಷ ಮೌಲ್ಯದ 58 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : 45 ಗ್ರಾಂ ಚಿನ್ನ, ಬೈಕ್ ಕೊಟ್ಟರೂ ನಿಲ್ಲದ ವರದಕ್ಷಿಣೆ ಕಿರುಕುಳ : ಮನನೊಂದ ಮಹಿಳೆ ಆತ್ಮಹತ್ಯೆ!



















