ಉಡುಪಿ : ಲಯನ್ಸ್ ಕ್ಲಬ್ ಹಕ್ಲಾಡಿಯ ಶಾಶ್ವತ ಯೋಜನೆಯಾದ ‘ಲಯನ್ಸ್ ಕುಟೀರ’ದಡಿ ನಿರ್ಮಿಸಲಾದ ನೂತನ ಮನೆಯನ್ನು ಹೊಳಮೊಗೆ ಗ್ರಾಮದ ತೊರೊಳ್ಳಿಯ ಹಿರಿಯ ಮಹಿಳೆ ಮುತ್ತು ಮೊಗವೀರ ಅವರಿಗೆ ಸಂಭ್ರಮದಿಂದ ಲೋಕಾರ್ಪಣೆ ಮಾಡಲಾಯಿತು.
ಒಂಟಿತನದ ಬದುಕು ಸಾಗಿಸುತ್ತಿದ್ದ ಮುತ್ತು ಮೊಗವೀರ ಅವರಿಗೆ ಕುಟುಂಬದ ಆಸರೆಯೂ ಇರಲಿಲ್ಲ. ಮಳೆಗಾಲದಲ್ಲಿ ಯಾವ ಕ್ಷಣದಲ್ಲಾದರೂ ಕುಸಿಯಬಹುದಾದ ಮನೆ, ಬೇಸಿಗೆಯಲ್ಲಿ ಸುಡುವ ಬಿಸಿಲನ್ನು ತಡೆಯಲಾಗದ ಪರಿಸ್ಥಿತಿಯಲ್ಲಿ ಅವರು ಬದುಕು ಸಾಗಿಸುತ್ತಿದ್ದರು. ಅವರ ಈ ದುಃಸ್ಥಿತಿಯನ್ನು ಮನಗಂಡ ಲಯನ್ಸ್ ಕ್ಲಬ್ ಹಕ್ಲಾಡಿ ಮಾನವೀಯತೆಯ ಕೈಚಾಚಿ, ಸುರಕ್ಷಿತವಾದ ನೂತನ ಮನೆಯನ್ನು ನಿರ್ಮಿಸಿ ಕೊಟ್ಟು ಅವರ ಹಲವು ವರ್ಷಗಳ ಕನಸನ್ನು ನನಸಾಗಿಸಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಕಮಿಷನರ್ ಹಾಗೂ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕುಂದಾಪುರ ರಶ್ಮಿ ಎಸ್.ಆರ್. (ಕೆ.ಎ.ಎಸ್.) ಅವರು, “ಲಯನ್ಸ್ ಕ್ಲಬ್ ಹಕ್ಲಾಡಿ ಸಮಾಜದ ಅಗತ್ಯಗಳನ್ನು ಗುರುತಿಸಿ ನಿಸ್ವಾರ್ಥ ಸೇವೆಯ ಮೂಲಕ ಸಾವಿರಾರು ಜನರ ಬದುಕಿನಲ್ಲಿ ಆಶಾಕಿರಣವಾಗುತ್ತಿದೆ. ಮನೆ ಕಟ್ಟಿಕೊಡುವಂತಹ ಸೇವೆ ಅತ್ಯುನ್ನತ ಮಾನವೀಯ ಕಾರ್ಯ. ಇಂತಹ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಿದ್ದು, ಇನ್ನಷ್ಟು ಸೇವಾಕಾರ್ಯಗಳಿಗೆ ಪ್ರೇರಣೆಯಾಗಲಿ” ಎಂದು ಹೇಳಿದರು.
Ln PMJF ಸಪ್ನಾ ಸುರೇಶ್, ಮಾಜಿ ಜಿಲ್ಲಾ ರಾಜ್ಯಪಾಲರು (Immediate Past District Governor), ನಾಮಫಲಕ ಅನಾವರಣಗೊಳಿಸಿ ಶುಭ ಹಾರೈಸಿದರು. ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪವನ್ ನಾಯ್ಕ್ ಅವರು ಮನೆಯ ಕೀಲಿಯನ್ನು ಹಸ್ತಾಂತರಿಸಿ ಫಲಾನುಭವಿಗೆ ಶುಭಾಶಯ ಕೋರಿದರು.
ಲಯನ್ಸ್ ಕ್ಲಬ್ ಹಕ್ಲಾಡಿಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಪ್ರಾಸ್ಥಾವಿಕ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕ್ಲಬ್ ಅಧ್ಯಕ್ಷ ಸುರೇಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮನೆ ಲೋಕಾರ್ಪಣೆ ವೇಳೆ ಮುತ್ತು ಮೊಗವೀರ ಅವರ ಕಣ್ಣಲ್ಲಿ ಮೂಡಿದ ಆನಂದಭಾಷ್ಪ ಅಲ್ಲಿದ್ದ ಪ್ರತಿಯೊಬ್ಬರ ಮನವನ್ನು ತಟ್ಟಿತು. ವರ್ಷಗಳ ಸಂಕಷ್ಟ, ಏಕಾಂತ ಮತ್ತು ಅಭದ್ರತೆಯ ಬದುಕಿನ ಬಳಿಕ ದೊರೆತ ಹೊಸ ಆಶ್ರಯ ಅವರ ಬದುಕಿಗೆ ಹೊಸ ಭರವಸೆಯ ಬೆಳಕಾಯಿತು. ಆ ಕಣ್ಣೀರು ದುಃಖದ್ದಲ್ಲ, ಅದು ಮಾನವೀಯತೆಯ ಗೆಲುವಿಗೆ ಸಾಕ್ಷಿಯಾದ ಸಂತಸದ ಕಣ್ಣೀರಾಗಿತ್ತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಪಂಚಾಯತ್ ಅಧಿಕಾರಿಗಳು,ಗಣ್ಯರು, ದಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಲ. ರಾಜೀವ ಶೆಟ್ಟಿ ಪ್ರಾರ್ಥಿಸಿದರು, ಲ. ಸತೀಶ್ ಶೆಟ್ಟಿ ಸ್ವಾಗತಿಸಿದರು. ಲ. ಸಂಜೀವ ಬಿಲ್ಲವ ವಂದಿಸಿದರು. ಲ. ಡಾ. ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : ಆಗುಂಬೆಯಲ್ಲಿ ಅಪರೂಪದ ಮರವಾಸಿ ಸಿಹಿನೀರಿನ ಏಡಿ ಪತ್ತೆ!



















