ಪ್ರಯಾಗ್‌ರಾಜ್ : ದೇಶದ ಶೈಕ್ಷಣಿಕ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರ ನಿಯಮವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಪಾಲಿಸಬೇಕು. ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ಅದನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ಹಿಜಾಬ್ ಇಸ್ಲಾಂ ಧರ್ಮದ ಅತ್ಯವಶ್ಯಕ ಭಾಗವೇನೂ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ವಿದ್ಯಾರ್ಥಿನಿಯ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಕಡ್ಡಾಯ ಅಥವಾ ಅತ್ಯಗತ್ಯ ಭಾಗವಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಪೂರ್ಣಗೊಳಿಸಿ, ಅದೇ ಶಾಲೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆಯಲು ಬಯಸಿದ್ದ ಬಾಲಕಿಯೊಬ್ಬಳು ತನ್ನ ತಾಯಿಯ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಆಕೆ ಅರ್ಜಿಯಲ್ಲಿ ಕೋರಿದ್ದಳು. ಆ ಯುವತಿಯು 6ನೇ ತರಗತಿಯಿಂದಲೂ ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡು ಬರುತ್ತಿದ್ದು, ಹಿಜಾಬ್ ಧಾರಣೆ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅರ್ಜಿದಾರಳ ವಿವಿಧ ತರಗತಿಗಳ ಛಾಯಾಚಿತ್ರಗಳನ್ನು ಪರಿಶೀಲಿಸಿತು. ಅರ್ಜಿದಾರ ವಿದ್ಯಾರ್ಥಿನಿಯನ್ನು ಹೊರತುಪಡಿಸಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಇತರ ಯಾವುದೇ ಹೆಣ್ಣುಮಕ್ಕಳು ಶಾಲೆಯಲ್ಲಿ ಶಿರವಸ್ತ್ರ ಧರಿಸಿಲ್ಲ ಎಂಬುದನ್ನು ಗಮನಿಸಿತು. ಹಿಜಾಬ್ ಧರಿಸುವುದು ಇಸ್ಲಾಂನ ಕಡ್ಡಾಯ ಭಾಗ ಎಂಬ ಅರ್ಜಿದಾರರ ವಾದವನ್ನು ಯಾವುದೇ ಬಲವಾದ ಆಧಾರವಿಲ್ಲದ ಹೇಳಿಕೆ ಎಂದು ಕೋರ್ಟ್ ತಿರಸ್ಕರಿಸಿತು. ಈ ವಿಷಯ ಬಂದಾಗಲೆಲ್ಲಾ, ಹಿಜಾಬ್ ಧರಿಸದಿದ್ದರೆ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂಬುದನ್ನು ಉಚ್ಚ ನ್ಯಾಯಾಲಯಗಳು ಒಪ್ಪಿಲ್ಲ ಮತ್ತು ಇದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂಬುದನ್ನು ಏಕರೂಪವಾಗಿ ಸ್ಪಷ್ಟಪಡಿಸಿವೆ ಎಂದು ಪೀಠ ಉಲ್ಲೇಖಿಸಿತು.
ಸಮವಸ್ತ್ರದ ನಿಯಮ
ಖಾಸಗಿ ಅನುದಾನರಹಿತ ಶೈಕ್ಷಣಿಕ ಸಂಸ್ಥೆಗಳಿಗೆ ತನ್ನ ಆವರಣದೊಳಗೆ ಏಕರೂಪದ ಸಮವಸ್ತ್ರ ನಿಯಮವನ್ನು ಜಾರಿಗೆ ತರುವ ಸಂಪೂರ್ಣ ಹಕ್ಕಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಶಾಲಾ ಸಮವಸ್ತ್ರ ಶಿಸ್ತು ಮತ್ತು ಸಮಾನತೆಯನ್ನು ಕಾಯ್ದುಕೊಳ್ಳಲು ಉದ್ದೇಶಿಸಿದ್ದು, ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ವೈಯಕ್ತಿಕ ಆಯ್ಕೆಯ ಆಧಾರದ ಮೇಲೆ ಸಮವಸ್ತ್ರವನ್ನು ಬದಲಾಯಿಸಲು ಅಥವಾ ಪ್ರತ್ಯೇಕ ಸೇರ್ಪಡೆಗಳಿಗೆ ಅನುಮತಿ ನೀಡಿದರೆ, ಅದು ‘ಸಮವಸ್ತ್ರ’ ಎಂಬ ಪರಿಕಲ್ಪನೆಗೇ ಧಕ್ಕೆ ತರುತ್ತದೆ. ಇದು ಶಾಲೆಯ ಶಿಸ್ತು ನಿರ್ಧರಿಸುವ ಅಧಿಕಾರವನ್ನು ಸಂಸ್ಥೆಯಿಂದ ವಿದ್ಯಾರ್ಥಿಗಳ ಕೈಗೆ ವರ್ಗಾಯಿಸಿದಂತಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಸದರಿ ಪ್ರಕರಣದಲ್ಲಿ ಶಾಲಾ ಆಡಳಿತ ಮಂಡಳಿ, ಉತ್ತರ ಪ್ರದೇಶ ರಾಜ್ಯ ಸರ್ಕಾರ ಹಾಗೂ ಸಿಬಿಎಸ್‌ಇ (CBSE) ಮಂಡಳಿಯು ಅರ್ಜಿಯನ್ನು ವಿರೋಧಿಸಿದ್ದವು. ವಿವಿಧ ಸಮುದಾಯಗಳ ಮಕ್ಕಳು ಕಲಿಯುವ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ವಿಶೇಷ ವಿನಾಯಿತಿ ನೀಡಿದರೆ, ಅದು ಸಂಸ್ಥೆಯ ಶಿಸ್ತು ಮತ್ತು ಏಕರೂಪತೆಯನ್ನು ಹಾಳುಮಾಡುತ್ತದೆ ಎಂದು ಶಾಲೆಯು ವಾದಿಸಿತ್ತು. ಕೋರ್ಟ್ ಈ ವಾದವನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ : ಸರ್ಕಾರಿ ಬ್ಯಾಂಕ್‌ಗಳಲ್ಲಿ 11,403 ಕ್ಲರ್ಕ್ ನೇಮಕಾತಿ : ಕರ್ನಾಟಕದಲ್ಲೂ ಇವೆ ಹುದ್ದೆಗಳು


















