ಮುಂಬೈ : ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಇದೀಗ ‘ಕಾಕ್ರೋಚ್ ಜನತಾ ಪಾರ್ಟಿ‘ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ತಮ್ಮ ಇಂಗ್ಲಿಷ್ ಭಾಷಾ ಸಂವಹನ ಶೈಲಿಯನ್ನು ಹೋಲಿಸುವ ವೈರಲ್ ವಿಡಿಯೋವೊಂದನ್ನು ಹಂಚಿಕೊಂಡು, ದೀಪ್ಕೆ ಅವರ ಇಂಗ್ಲಿಷ್ ಜ್ಞಾನವನ್ನು ಬಹಿರಂಗವಾಗಿಯೇ ವ್ಯಂಗ್ಯ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಎಂದು ಹೇಳಿಕೊಳ್ಳುವ CJP ನಾಯಕ ಅಭಿಜಿತ್ ದೀಪ್ಕೆ ಸಾರ್ವಜನಿಕವಾಗಿ ಇಂಗ್ಲಿಷ್‌ನಲ್ಲಿ ನೀಡಿದ ಹೇಳಿಕೆ ಮತ್ತು ಚಲನಚಿತ್ರ ರಂಗದ ಅನುಭವದ ಬಗ್ಗೆ ಕಂಗನಾ ನೀಡಿದ ಇಂಗ್ಲಿಷ್ ಭಾಷಣದ ತುಣುಕುಗಳನ್ನು ಮುಖಾಮುಖಿ ಮಾಡಲಾಗಿದೆ. “ಕಂಗನಾ ರಣಾವತ್ ಮತ್ತು ದೀಪ್ಕೆ ಅವರ ಇಂಗ್ಲಿಷ್ ಮಟ್ಟ: ಒಬ್ಬರು ಬೆಂಕಿಯಾದರೆ, ಇನ್ನೊಬ್ಬರಿಗೆ ರೀಬೂಟ್ ಅಗತ್ಯವಿದೆ” ಎಂಬ ಅಡಿಬರಹದೊಂದಿಗೆ ಈ ವಿಡಿಯೋ ವೈರಲ್ ಆಗಿದೆ. ಇದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಕಂಗನಾ, ತಮ್ಮ ಮೇಲಿನ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ.
ಬಾಲಿವುಡ್ ಬಾಲ್ಯದ ಕಹಿ ನೆನಪುಗಳು
ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ತಮಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ ಎಂಬುದನ್ನು ಕಂಗನಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ನಟಿ ಸೋನಮ್ ಕಪೂರ್ ತಮ್ಮ ಇಂಗ್ಲಿಷ್ ಭಾಷೆಯನ್ನು ಗೇಲಿ ಮಾಡಿದ್ದನ್ನು ನೆನಪಿಸಿಕೊಂಡ ಕಂಗನಾ, “ಚಲನಚಿತ್ರ ಮಾಫಿಯಾದೊಂದಿಗಿನ ವರ್ಷಗಳ ಹೋರಾಟದಿಂದ ನಾನು ಕಲಿತದ್ದೇನೆಂದರೆ, ಇನ್ಮುಂದೆ ಯಾವೊಬ್ಬ ಹೊರಗಿನ ವ್ಯಕ್ತಿಯೂ ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಗೇಲಿಗೊಳಗಾಗುವುದಿಲ್ಲ. ಜೊತೆಗೆ, ಆ ಶೋ ಕೂಡ ಶಾಶ್ವತವಾಗಿ ಬಂದ್ ಆಗಿದೆ,” ಎಂದು ಕಿಡಿಕಾರಿದ್ದಾರೆ. ಜೊತೆಗೆ ತಮ್ಮ 24ನೇ ವಯಸ್ಸಿನಲ್ಲೇ ಸಾರ್ವಜನಿಕ ನಿಂದನೆಗಳನ್ನು ಎದುರಿಸಿಯೂ ಘನತೆ ಮತ್ತು ವೃತ್ತಿಪರತೆಯನ್ನು ಮೆರೆದಿರುವುದಾಗಿ ಹೇಳಿದ್ದಾರೆ.
ಸಿಜೆಪಿ ನಾಯಕರ ಜೊತೆ ಸಾಲು ಸಾಲು ಸಮರ
ಸಿಜೆಪಿ ನಾಯಕರೊಂದಿಗೆ ಕಂಗನಾ ಅವರ ವಾಗ್ದಾಳಿ ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಸಿಜೆಪಿ ವಕ್ತಾರ ಸೌರವ್ ದಾಸ್, “ಕಂಗನಾ ಅವರನ್ನು ಸಂಸದೆಯಾಗಿ ಯುವಜನತೆ ಗಂಭೀರವಾಗಿ ಪರಿಗಣಿಸುವುದಿಲ್ಲ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕಂಗನಾ, “ಅವನಿಗೆ 28 ವರ್ಷ, ಇನ್ನೂ ವಿದ್ಯಾರ್ಥಿ ಎಂದು ಹೇಗೆ ಹೇಳಿಕೊಳ್ಳುತ್ತಾನೋ ಗೊತ್ತಿಲ್ಲ. ನಾನು ರಾಜಕೀಯಕ್ಕೆ ಬಂದು 2 ವರ್ಷಗಳಾಗಿರಬಹುದು, ಆದರೆ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಅವನ ವಯಸ್ಸಿನಲ್ಲಿ ನಾನು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದೆ,” ಎಂದು ಸವಾಲು ಎಸೆದಿದ್ದರು.
ಪ್ರಸ್ತುತ ‘ಭಾರತ್ ಭಾಗ್ಯ ವಿಧಾತಾ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಕಂಗನಾ, ಮುಂದಿನ ದಿನಗಳಲ್ಲಿ ‘ತಲೈವಿ’ ಚಿತ್ರದ ನಿರ್ದೇಶಕ ಎ.ಎಲ್. ವಿಜಯ್ ಅವರ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ನಟ ಆರ್. ಮಾಧವನ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಗಾಯದ ನಡುವೆಯೂ ಸಿಡಿದೆದ್ದ ಪಂತ್ : ಭರ್ಜರಿ ಸಿಕ್ಸರ್‌ಗೆ ಪುಡಿಯಾದ ಸ್ಟೇಡಿಯಂನ ಸೋಲಾರ್ ಪ್ಯಾನಲ್!



















